ದ.ಕ.ಜಿಲ್ಲೆ; ಕೋವಿಡ್ ಮೂರನೇ ಅಲೆಗೆ 56 ಬಲಿ

ಮಂಗಳೂರು, ಜ.31: ಕೋವಿಡ್ ಮೂರನೆ ಅಲೆಗೆ ದ.ಕ.ಜಿಲ್ಲೆಯಲ್ಲಿ 56 ಮಂದಿ ಬಲಿಯಾಗಿದ್ದಾರೆ ಎಂದು ದ.ಕ.ಜಿಲ್ಲಾಡಳಿತ ಸೋಮವಾರ ಪ್ರಕಟಿಸಿದೆ.
ಅದರಲ್ಲಿ 40 ಮಂದಿ ಪುರುಷರು ಮತ್ತು 16 ಮಂದಿ ಮಹಿಳೆಯರು ಸೇರಿದ್ದಾರೆ. ಆ ಪೈಕಿ 16 ಮಂದಿ ಸರಕಾರಿ ಆಸ್ಪತ್ರೆಯಲ್ಲೂ 40 ಮಂದಿ ಖಾಸಗಿ ಆಸ್ಪತ್ರೆಯಲ್ಲೂ ಕೊನೆಯುಸಿರೆಳೆದಿದ್ದಾರೆ. ಅಲ್ಲದೆ 22 ಮಂದಿ ಕೋವಿಡ್ ಮತ್ತು 34 ಮಂದಿ ಕೋವಿಡೇತರ ಗುಣಲಕ್ಷಣವುಳ್ಳವರು ಮೃತಪಟ್ಟಿದ್ದಾರೆ.
ಮೃತಪಟ್ಟ 56 ಮಂದಿಯ ಪೈಕಿ ಮಂಗಳೂರು ತಾಲೂಕಿನ 28, ಪುತ್ತೂರಿನ 3, ಬಂಟ್ವಾಳದ 5, ಬೆಳ್ತಂಗಡಿಯ 4, ಸುಳ್ಯದ 1 ಸಹಿತ 41 ದ.ಕ.ಜಿಲ್ಲೆ ಹಾಗೂ ಹೊರ ಜಿಲ್ಲೆಯ 15 ಮಂದಿ ಸೇರಿದ್ದಾರೆ.
ಆಸ್ಪತ್ರೆಗೆ ದಾಖಲಾದ 24 ಗಂಟೆಯೊಳಗೆ 17 ಮಂದಿ, 48 ಗಂಟೆಯೊಳಗೆ 6 ಮಂದಿ, 72 ಗಂಟೆಯೊಳಗೆ ಒಬ್ಬರು ಮತ್ತು 96 ಗಂಟೆಯೊಳಗೆ 28 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ ದ.ಕ.ಜಿಲ್ಲೆಯ 41 ಮತ್ತು ಹೊರ ಜಿಲ್ಲೆಯ 15 ಮಂದಿ ಸೇರಿದ್ದಾರೆ.
ಇನ್ನು ಮೃತಪಟ್ಟವರಲ್ಲಿ 16ರಿಂದ 20 ವರ್ಷ ವಯಸ್ಸಿನ ಒಬ್ಬ ಪುರುಷ, 21ರಿಂದ 30 ವರ್ಷ ವಯಸ್ಸಿನ ಒಬ್ಬ ಪುರುಷ, 41ರಿಂದ 50 ವರ್ಷ ವಯಸ್ಸಿನ ಮೂವರು ಮಹಿಳೆಯರು ಮತ್ತು ಐವರು ಪುರುಷರು, 51ರಿಂದ 60 ವರ್ಷ ವಯಸ್ಸಿನ ಒಬ್ಬರು ಮಹಿಳೆ ಮತ್ತು 7 ಮಂದಿ ಪುರುಷರು, 61ರಿಂದ 70 ವರ್ಷ ವಯಸ್ಸಿನ 4 ಮಂದಿ ಮಹಿಳೆಯರು ಮತ್ತು 9 ಮಂದಿ ಪುರುಷರು, 71ರಿಂದ 80 ವರ್ಷ ವಯಸ್ಸಿನ ಐವರು ಮಹಿಳೆಯರು ಮತ್ತು 11 ಮಂದಿ ಪುರುಷರು, 81ರಿಂದ 90 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಮತ್ತು 4 ಮಂದಿ ಪುರುಷರು ಹಾಗೂ 91 ವರ್ಷ ವಯಸ್ಸು ಮೇಲ್ಪಟ್ಟ ಒಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದ್ದಾರೆ.
ಮೃತ 56 ಮಂದಿಯ ಪೈಕಿ 27 ಮಂದಿ ಎರಡೂ ಡೋಸ್ ಲಸಿಕೆಯನ್ನು ಪಡೆದಿದ್ದರೆ, ಇಬ್ಬರು ಮಾತ್ರ ಒಂದು ಡೋಸ್ ಲಸಿಕೆ ಪಡೆದಿದ್ದಾರೆ. 27 ಮಂದಿ ಒಂದೇ ಒಂದು ಡೋಸ್ ಲಸಿಕೆಯನ್ನೂ ಪಡೆದಿರಲಿಲ್ಲ ಎಂದು ದ.ಕ.ಜಿಲ್ಲಾಡಳಿತ ತಿಳಿಸಿದೆ.







