ಪೆಗಾಸಸ್ ಪ್ರಕರಣ: ಐಟಿ ಸಚಿವರ ವಿರುದ್ಧ ವಿಶೇಷ ಹಕ್ಕು ಮಂಡಿಸಲು ನೋಟಿಸ್ ನೀಡಿದ ಸಿಪಿಐ ಸಂಸದ

Photo- Pti
ಹೊಸದಿಲ್ಲಿ: ಪೆಗಾಸಸ್ ಸ್ಪೈವೇರ್ ಕುರಿತು ಕಳೆದ ವರ್ಷ ಸಂಸತ್ತಿಗೆ ನೀಡಿದ ಹೇಳಿಕೆಗಾಗಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ವಿರುದ್ಧ ಭಾರತೀಯ ಕಮ್ಯುನಿಸ್ಟ್ ಪಕ್ಷದ ಸಂಸದ ಬಿನೋಯ್ ವಿಶ್ವಂ ಸೋಮವಾರ ರಾಜ್ಯಸಭಾದಲ್ಲಿ ಹಕ್ಕುಚ್ಯುತಿ ನಿಲುವಳಿ ಮಂಡಿಸಲು ನೋಟಿಸ್ ಸಲ್ಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ನ್ಯೂಯಾರ್ಕ್ ಟೈಮ್ಸ್ನಲ್ಲಿ ಪೆಗಾಸಸ್ ಹಾಗೂ ಭಾರತ ಸರ್ಕಾರದ ಸಂಬಂಧದ ಕುರಿತು ವರದಿ ಪ್ರಕಟವಾದ ನಂತರ ನೊಟೀಸ್ ಸಲ್ಲಿಸಿರುವುದಾಗಿ ವಿಶ್ವಂ ಹೇಳಿದ್ದಾರೆ. ಭಾರತ ಸರ್ಕಾರವು 2017 ರಲ್ಲಿ $ 2 ಬಿಲಿಯನ್ ರಕ್ಷಣಾ ಪ್ಯಾಕೇಜ್ನ ಭಾಗವಾಗಿ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನು ಖರೀದಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಜುಲೈನಲ್ಲಿ, NSO ಗ್ರೂಪ್ ಅಭಿವೃದ್ಧಿಪಡಿಸಿದ ಪೆಗಾಸಸ್ ಬಳಕೆಯ ಕುರಿತು ಪ್ರಪಂಚದಾದ್ಯಂತದ ಹಲವಾರು ಮಾಧ್ಯಮ ಸಂಸ್ಥೆಗಳು ವರದಿ ಮಾಡಿದ್ದವು. ಭಾರತದಲ್ಲಿ, ಪೆಗಾಸಸ್ ಮೂಲಕ 161 ಭಾರತೀಯರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂದು ದಿ ವೈರ್ ವರದಿ ಮಾಡಿತ್ತು.
ಜುಲೈ 19 ರಂದು ಸಂಸತ್ತಿನಲ್ಲಿ ಮಾತನಾಡಿದ್ದ ವೈಷ್ಣವ್ ಪತ್ರಕರ್ತರು, ಕಾರ್ಯಕರ್ತರು ಮತ್ತು ವಿರೋಧ ಪಕ್ಷದ ನಾಯಕರ ಮೇಲೆ ಕಣ್ಣಿಡಲು ಪೆಗಾಸಸ್ ಅನ್ನು ಬಳಸುತ್ತಾರೆ ಎಂಬ ವರದಿಗಳನ್ನು ತಳ್ಳಿಹಾಕಿದ್ದರು. ಭಾರತದಲ್ಲಿ ಅಕ್ರಮವಾಗಿ ಕಣ್ಗಾವಲು ಇಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ವರದಿಯು "ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸುಸ್ಥಾಪಿತ ಸಂಸ್ಥೆಗಳನ್ನು" ಕೆಡಿಸುವ ಪ್ರಯತ್ನವಾಗಿದೆ ಎಂದು ವೈಷ್ಣವ್ ಆರೋಪಿಸಿದ್ದರು.
ಕಣ್ಗಾವಲು ಆರೋಪಗಳು ಗಂಭೀರವಾಗಿದೆ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದ್ದರೂ, ಉದ್ದೇಶಪೂರ್ವಕವಾಗಿ ಸಂಸದರನ್ನು ದಾರಿ ತಪ್ಪಿಸುವ ವೈಷ್ಣವ್ ಅವರ ಪ್ರಯತ್ನವು ವಿಶೇಷ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಿಶ್ವಂ ಸೋಮವಾರ ಹೇಳಿದ್ದಾರೆ.







