ಚಿಕ್ಕಮಗಳೂರು: ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಪ್ರಧಾನಮಂತ್ರಿಗೆ ಪತ್ರ ಬರೆದ ಹೇರಡಿಕೆ ಗ್ರಾಮಸ್ಥರು

ಚಿಕ್ಕಮಗಳೂರು: ಕಾರಗದ್ದೆ ಗ್ರಾಮದಿಂದ ವಿವಿಧ ಗ್ರಾಮಗಳ ಸಂಪರ್ಕದ ರಸ್ತೆ ಕಳೆದ 30 ವರ್ಷಗಳಿಂದ ದುರಸ್ತಿ ಕಂಡಿಲ್ಲವಾಗಿದ್ದು, ರಸ್ತೆಯನ್ನು ಶೀಘ್ರ ದುರಸ್ತಿಪಡಿಸಬೇಕು ಹಾಗೂ ಅಂಗನವಾಡಿ ಕೇಂದ್ರ, ಸಮುದಾಯ ಭವನ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ನಿವೇಶನ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಶೀಘ್ರ ಕ್ರಮವಹಿಸಬೇಕೆಂದು ಆಗ್ರಹಿಸಿ ಜಿಲ್ಲೆಯ ಕಳಸ ತಾಲೂಕು ವ್ಯಾಪ್ತಿಯ ಹೇರಡಿಕೆ ಗ್ರಾಮದ ನಿವಾಸಿಗಳು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದು, ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸದಿದ್ದಲ್ಲಿ ಮುಂದಿನ ಎಲ್ಲ ಚುನಾವಣೆಗಳನ್ನೂ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.
ಜಿಲ್ಲೆಯ ಕಳಸ ತಾಲೂಕು ವ್ಯಾಪ್ತಿಯಲ್ಲಿರುವ ಕಳಸ-ಕಾರಗದ್ದೆ ಗ್ರಾಮ ಸಂಪರ್ಕದ ಮುಖ್ಯ ರಸ್ತೆಯಿಂದ ನಡುಗುಡಿಗೆ, ಭಟ್ರುಮಕ್ಕಿ, ಹೇರಡಿಕೆ, ಕೈಮರ, ಗಾಳಿಗಂಡಿ ಸಂಪರ್ಕದ ಸುಮಾರು 20 ಕಿಮೀ ಉದ್ದದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ರಸ್ತೆ ಕಳೆದ 30 ವರ್ಷಗಳಿಂದ ದುರಸ್ತಿ ಇಲ್ಲದೇ ಅಸ್ತಿಪಂಜರದಂತಾಗಿದೆ. ಹದಗೆಟ್ಟ ರಸ್ತೆಯಿಂದಾಗಿ ಗ್ರಾಮಸ್ಥರು ಕಳಸ, ಮೂಡಿಗೆರೆ ತಾಲೂಕು ಕೇಂದ್ರಗಳಿಗೆ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಕೆಸರುಗುಂಡಿಯಾಗುವ ರಸ್ತೆಯಲ್ಲಿ ಗ್ರಾಮಸ್ಥರು ನಡೆದಾಡಲೂ ಸಾಧ್ಯವಾಗುತ್ತಿಲ್ಲ.
ಹೊಂಡ ಗುಂಡಿಗಳಿಂದ ಕೂಡಿರುವ ರಸ್ತೆಯ ದುಸ್ಥಿತಿಯಿಂದಾಗಿ ಶಾಲಾ ಕಾಲೇಜು ಮಕ್ಕಳು ಸಕಾಲದಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ. ಹದಗೆಟ್ಟ ರಸ್ತೆಯಿಂದಾಗಿ ಶಾಲಾ ಕಾಲೇಜು ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಗ್ರಾಮಸ್ಥರು ಅನಾರೋಗ್ಯ ಪೀಡಿತರಾದ ಸಂದರ್ಭದಲ್ಲಿ ತುರ್ತಾಗಿ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಹದಗೆಟ್ಟ ರಸ್ತೆಯ ಸ್ಥಿತಿ ಕಂಡು ಆಟೊ, ಜೀಪ್, ಟ್ರ್ಯಾಕ್ಟರ್‍ನಂತಹ ವಾಹನಗಳು ಈ ಗ್ರಾಮಗಳಿಗೆ ಬಾಡಿಗೆಗೆ ಬರಲು ಹಿಂಜರಿಯುತ್ತಿದ್ದು, ಬಾಡಿಗೆ ಬಂದರೂ ದುಪ್ಪಟ್ಟು ಬಾಡಿಗೆ ಕೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಪ್ರಧಾನಮಂತ್ರಿಗೆ ಬರೆದಿರುವ ಮನವಿ ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಈ ಗ್ರಾಮಗಳ ಸಂಪರ್ಕದ ರಸ್ತೆಗೆ ಕಳೆದ 30 ವರ್ಷಗಳಿಂದ ಡಾಂಬರೀಕರಣ ಮಾಡಿಲ್ಲ. ರಸ್ತೆಯಿಂದಾಗಿರುವ ಅನಾನುಕೂಲವನ್ನು ಈ ಹಿಂದೆ ಹಲವು ಬಾರಿ ಸರಕಾರ, ಗ್ರಾಪಂ, ಶಾಸಕ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿ, ಜನಪ್ರತಿನಿಧಿಗಳಿಗೂ ಮನವಿ ಮಾಡಲಾಗಿದೆ. ಆದರೂ ಇದುವರೆಗೂ ಗ್ರಾಮಸ್ಥರ ಬೇಡಿಕೆ ಈಡೇರಿಲ್ಲ. ಚುನಾವಣೆ ಸಂದರ್ಭ ಓಟು ಕೇಳಲು ಶಾಸಕಾರಾದಿಯಾಗಿ ಎಲ್ಲ ಜನಪ್ರತಿನಿಧಿಗಳು ಮನೆ ಬಾಗಿಲು ಬರುತ್ತಾರೆ. ಈ ವೇಳೆ ಗ್ರಾಮಸ್ಥರ ಸಮಸ್ಯೆ ಹೇಳಿಕೊಂಡಲ್ಲಿ ಭರವಸೆ ನೀಡಿ ಹೋಗುವ ಜನಪ್ರತನಿಧಿಗಳು ಸಮಸ್ಯೆ ಪರಿಹಾರಿಸದೇ ಮತ್ತೆ 5 ವರ್ಷಗಳ ಬಳಿಕ ಗ್ರಾಮಗಳತ್ತ ತಲೆ ಹಾಕುತ್ತಿದ್ದಾರೆ. ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಪ್ರಧಾನಮಂತ್ರಿಗೆ ಪತ್ರ ಬರೆಯುತ್ತಿದ್ದೇವೆ ಎಂದು ನಿವಾಸಿಗಳು ದೂರಿದ್ದಾರೆ.
ಈ ಗ್ರಾಮಗಳ ವ್ಯಾಪ್ತಿಯಲ್ಲಿ ಬಡಜನರು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಎಸ್ಸಿ, ಎಸ್ಟಿ ಸಮುದಾಯದ ಜನರು ವಾಸವಾಗಿದ್ದಾರೆ. ಗ್ರಾಮಸ್ಥರ ಮಕ್ಕಳ ಶಿಕ್ಷಣಕ್ಕಾಗಿ ಹೇರಡಿಕೆಯಲ್ಲಿ ಅಂಗನವಾಡಿ ಕೇಂದ್ರವಿದ್ದು, ಅಂಗನವಾಡಿಗೆ ಸುಸಜ್ಜಿತ ಕಟ್ಟಡ ಇಲ್ಲ. ಇದರಿಂದಾಗಿ ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗಿದೆ. ಅಲ್ಲದೇ ಗ್ರಾಮದಲ್ಲಿ ಸಮುದಾಯ ಭವನ ಇಲ್ಲದಿರುವುದರಿಂದ ಗ್ರಾಮದಲ್ಲಿ ಸಭೆ, ಸಮಾರಂಭಗಳನ್ನು ಮಾಡಲು ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಈ ಭಾಗದ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಸ್ಥಳೀಯ ಗ್ರಾಪಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಲ್ಲದೇ ಈ ಭಾಗದಲ್ಲಿ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಬಡವರಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು ಸರಕಾರ, ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಹದಗೆಟ್ಟ ರಸ್ತೆ ದುರಸ್ತಿಗೊಳಿಸಿ, ಸುಸಜ್ಜಿತ ಅಂಗನವಾಡಿ ಕಟ್ಟಡ ಹಾಗೂ ಸಮುದಾಯ ಭವನ ನಿರ್ಮಾಣ, ನೀರು, ಹಕ್ಕುಪತ್ರ ಕಲ್ಪಿಸಲು ಮುಂದಾಗಬೇಕು. ತಪ್ಪಿದಲ್ಲಿ ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.







