ಮಾನ್ಯತಾ ಟೆಕ್‍ಪಾರ್ಕ್, ರಾಯಲ್ ಗ್ರಾಂಡ್ ಕಲ್ಯಾಣಮಂಟಪ, ರೇವಾ ವಿವಿಗೆ ಜಪ್ತಿ ವಾರೆಂಟ್ ನೀಡಿದ ಬಿಬಿಎಂಪಿ

ಬೆಂಗಳೂರು, ಫೆ.1: ಬಿಬಿಎಂಪಿಯ ಯಲಹಂಕ ವಲಯದ ಮಾನ್ಯತಾ ಟೆಕ್‍ಪಾರ್ಕ್, ರಾಯಲ್ ಗ್ರಾಂಡ್ ಕಲ್ಯಾಣಮಂಟಪ ಹಾಗೂ ರೇವಾ ವಿಶ್ವವಿದ್ಯಾಲಯವು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಾರಣ ಮಂಗಳವಾರದಂದು ಜಪ್ತಿ ವಾರೆಂಟ್ ನೀಡಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ಯಲಹಂಕ ವಲಯದ ಥಣಿಸಂದ್ರ ವಾರ್ಡ್‍ನ ನಾಗವಾರ ರಿಂಗ್ ರಸ್ತೆಯಲ್ಲಿರುವ ಮಾನ್ಯತಾ ಟೆಕ್‍ಪಾರ್ಕ್ ತೆರಿಗೆಯನ್ನು ಸಕಾಲದಲ್ಲಿ ಪಾವತಿಸುತ್ತಾ ಬಂದಿದೆ. ಆದರೆ, ಪಾರ್ಕ್‍ನಲ್ಲಿರುವ 9 ವಿವಿಧ ಬ್ಲಾಕ್‍ಗಳ ಕಟ್ಟಡಗಳಿಗೆ ಪಾಲಿಕೆಯು 2018-19ನೇ ಸಾಲಿನಲ್ಲಿ ಟೋಟಲ್ ಸ್ಟೇಷನ್ ಸರ್ವೆ ಕೈಗೊಂಡಿದ್ದು, ಆಸ್ತಿ ತೆರಿಗೆ ಪಾವತಿಯಲ್ಲಿ ಕಟ್ಟಡದ ಅಳತೆಯನ್ನು ಕಡಿಮೆ ನಮೂದಿಸಿರುವುದು ಕಂಡು ಬಂದಿರುತ್ತದೆ. ಹಾಗಾಗಿ ತೆರಿಗೆ ವಂಚನೆಗಾಗಿ ಪಾಲಿಕೆ ಅಧಿನಿಯಮ 2020 ನಿಯಮ 148(4)ರಂತೆ ದುಪ್ಪಟು ದಂಡ ವಿಧಿಸಲಾಗಿದೆ. ತೆರಿಗೆ ಬಾಕಿ ಮತ್ತು ದಂಡ ಸೇರಿ ಒಟ್ಟು 101,38,87,611 ರೂ.ಗಳಿಗೆ ನೋಟಿಸ್ ನೀಡಿದ್ದು, ಮಾಲಕರು 28,67,97,434 ರೂ.ಗಳನ್ನು ಮಾತ್ರ ಪಾವತಿಸಿದ್ದಾರೆ. ಬಾಕಿ ಉಳಿಸಿಕೊಂಡ 72,70,90,177 ರೂ.ಗಳನ್ನು ಪಾವತಿಸುವಂತೆ ನೋಟಿಸ್ ಅನ್ನು ಜಾರಿ ಮಾಡಲಾಗಿದೆ. ಆದರೂ ತೆರಿಗೆ ಪಾವತಿ ಮಾಡದ ಕಾರಣ ಜಪ್ತಿ ವಾರೆಂಟ್ ನೀಡಲಾಗಿರುತ್ತದೆ ಎಂದು ತಿಳಿಸಿದೆ.
ನಾಗವಾರ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಎನ್. ಆನಂದಮೂರ್ತಿ ಮಾಲಕತ್ವದ ರಾಯಲ್ ಗ್ರಾಂಡ್ ಕಲ್ಯಾಣಮಂಟಪಕ್ಕೆ 2012-2013 ಸಾಲಿನಿಂದ ಇಲ್ಲಿಯವರೆಗೂ 70,68,930 ರೂ. ತೆರಿಗೆ ಹಣವನ್ನು ಪಾವತಿಸದ ಕಾರಣ ನೋಟಿಸ್ ನೀಡಲಾಗಿತ್ತು. ಕಳೆದ ತಿಂಗಳು ರೂ. 9 ಲಕ್ಷಕ್ಕೆ ಚೆಕ್ ನೀಡಿದ್ದು, ಬ್ಯಾಂಕಿನ ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಅಮಾನ್ಯಗೊಂಡಿರುತ್ತದೆ. ಹಾಗಾಗಿ ಜಪ್ತಿ ವಾರೆಂಟ್ ನೀಡಲಾಗಿದೆ ಎಂದು ತಿಳಿಸಿದೆ.
ಜಕ್ಕೂರು ವಾರ್ಡ್ ವ್ಯಾಪ್ತಿಯ ಕಟ್ಟಿಗೇನಹಳ್ಳಿ ಗ್ರಾಮದಲ್ಲಿರುವ 101ರ ರುಕ್ಮಿಣಿ ಎಜುಕೇಷನ್ ಚಾರಿಟಬಲ್ ಟ್ರಸ್ಟ್ ಮಾಲಕತ್ವದ ರೇವಾ ವಿಶ್ವವಿದ್ಯಾಲಯ ಕಟ್ಟಡಗಳಿಗೆ 2018-19ನೇ ಸಾಲಿನಲ್ಲಿ ಟೋಟಲ್ ಸ್ಟೇಷನ್ ಸರ್ವೆ ಕೈಗೊಂಡಿದ್ದು, ಆಸ್ತಿ ತೆರಿಗೆ ಪಾವತಿಯಲ್ಲಿ ಕಟ್ಟಡದ ಅಳತೆಯನ್ನು ಕಡಿಮೆ ನಮೂದಿಸಿರುವುದು ಕಂಡು ಬಂದಿದೆ. ಆದುದರಿಂದ 16,95,64,078 ರೂ.ಗಳು ಬಾಕಿ ಇದ್ದು, ಬಾಕಿ ಮೊತ್ತವನ್ನು ಪಾವತಿಸಲು ನೋಟಿಸ್ ನೀಡಲಾಗಿತ್ತು. ಆದರೆ ಬಾಕಿ ಮೊತ್ತವನ್ನು ಪಾವತಿಸದ ಕಾರಣ ಜಪ್ತಿ ವಾರೆಂಟ್ ನೀಡಲಾಗಿರುತ್ತದೆ ಎಂದು ಪಾಲಿಕೆಯು ತಿಳಿಸಿದೆ.








