ರಾಣೆಬೆನ್ನೂರಿನಲ್ಲಿ ಹೈಟೆಕ್ ರೇಶ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಐದು ಎಕರೆ ಭೂಮಿ ಮಂಜೂರು: ಸಚಿವ ಡಾ.ನಾರಾಯಣಗೌಡ

ಬೆಂಗಳೂರು, ಫೆ. 1: ರಾಣೆಬೆನ್ನೂರಿನಲ್ಲಿ ಹೈಟೆಕ್ ರೇಶ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಐದು ಎಕರೆ ಜಮೀನು ಮಂಜೂರಾಗಿದೆ ಎಂದು ರೇಶ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.
ಹಾವೇರಿ ಜಿಲ್ಲಾ ಪ್ರವಾಸದ ವೇಳೆ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಸೇರಿದಂತೆ ಹಲವು ರೇಶ್ಮೆ ಬೆಳೆಗಾರರು ಮನವಿ ಮಾಡಿದ್ದರು. ಅದರಂತೆ ರಾಣೆಬೆನ್ನೂರು ತಾಲೂಕಿನ ಕೂನಬೇವು ಗ್ರಾಮದಲ್ಲಿ ರೇಶ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇದಕ್ಕಾಗಿ ಅಗತ್ಯವಿರುವ ಜಾಗ ನೀಡುವಂತೆ ಸಚಿವ ಡಾ.ನಾರಾಯಣಗೌಡ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ರೇಶ್ಮೆ ಇಲಾಖೆಗೆ 5.1 ಎಕರೆ ಭೂಮಿಯನ್ನು ಮಂಜೂರು ಮಾಡಿ ಹಾವೇರಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ರಾಣೆಬೆನ್ನೂರಿನಲ್ಲಿ ಹೈಟೆಕ್ ರೇಶ್ಮೆ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದ್ದು, ಅದಕ್ಕೆ ಅಗತ್ಯವಿರುವ ಭೂಮಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಇದೀಗ ಜಿಲ್ಲಾಧಿಕಾರಿಗಳು ಕೂನಬೇವು ಗ್ರಾಮದಲ್ಲಿ ಐದು ಎಕರೆ ಜಾಗವನ್ನು ಗುರುತಿಸಿ, ರೇಷ್ಮೆ ಇಲಾಖೆಗೆ ಮಂಜೂರು ಮಾಡಿದ್ದಾರೆ. ಇದರಿಂದ ಉತ್ತರ ಕರ್ನಾಟಕ ಭಾಗದ ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಶೀಘ್ರದಲ್ಲೇ ರೇಶ್ಮೆ ಇಲಾಖೆಯ ಸುಪರ್ದಿಗೆ ಪಡೆಯಲಾಗುತ್ತದೆ. ಅಲ್ಲದೆ ರಾಣೆಬೆನ್ನೂರಿನಲ್ಲಿ ಹೈಟೆಕ್ ರೇಶ್ಮೆ ಮಾರುಕಟ್ಟೆ ನಿರ್ಮಾಣದ ಈ ಬಾರಿಯ ಬಜೆಟ್‍ನಲ್ಲಿ ಘೋಷಣೆ ಮಾಡಿಸಲಾಗುತ್ತದೆ. ಆದಷ್ಟು ಬೇಗ ರೇಶ್ಮೆ ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







