ದ.ಕ. ಜಿಲ್ಲೆ: ಬಜೆಟ್‌ಗೆ ಜನಪ್ರತಿನಿಧಿಗಳ ಪ್ರತಿಕ್ರಿಯೆಗಳು
ಅತಿ ಸಣ್ಣ ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕೆ ಕೇಂದ್ರ ಸರಕಾರದ ಬಜೆಟ್ ಹಲವು ಯೋಜನೆಗಳನ್ನು ಘೋಷಿಸಿರುವುದು ಸ್ವಾಗತಾರ್ಹ. ಎಂಎಸ್‌ಎಂಇ ಕ್ಷೇತ್ರಕ್ಕೆ ಇಸಿಎಲ್‌ಜಿ ಸ್ಕೀಮ್‌ನ್ನು ಮಾರ್ಚ್ 23ರವರೆಗೆ ವಿಸ್ತರಣೆ ಮಾಡಿದೆ. ಅಲ್ಲದೆ ಗ್ಯಾರಂಟಿ ಕವರ್ ಹೆಚ್ಚುವರಿ 50,000 ಕೋ.ರೂ. ಹೆಚ್ಚಿಸಿದೆ. ಇದರಿಂದ ತುಂಬಾ ಪ್ರಯೋಜನವಾಗಿದೆ. ಯಾವುದೇ ಗ್ಯಾರಂಟಿ ಇಲ್ಲದೆ ಬ್ಯಾಂಕ್‌ನಿಂದ ನೇರವಾಗಿ ಸಾಲ ಪಡೆಯಲು ಸಾಧ್ಯವಾಗಲಿದೆ. ಎಂಎಸ್‌ಎಂಇಗಳನ್ನು ಸಶಕ್ತಗೊಳಿಸಲು ಆರ್‌ಎಎಂಪಿ ಯೋಜನೆ ಘೋಷಿಸಲಾಗಿದೆ. ಉದ್ಯೋಗಿಗಳ ಕೌಶಲ್ಯವೃದ್ಧಿಗೆ ಉತ್ತೇಜನ ನೀಡಲಾಗಿದೆ. ಇದು ಭವಿಷ್ಯದಲ್ಲಿ ಎಂಸ್‌ಎಂಇಗಳ ಬೆಳವಣಿಗೆಗೆ ಪೂರಕವಾಗಲಿದೆ. ಸರಕಾರದ ಉತ್ತೇಜನಾ ಕ್ರಮಗಳು ಶ್ಲಾಘನೀಯ.
- ಐಸಾಕ್ ವಾಜ್, ಅಧ್ಯಕ್ಷರು, ಕೆನರಾ ಇಂಡಸ್ಟ್ರೀಸ್ ಅಸೋಯಿಯೇಶನ್ (ಕೆಐಎ)
*ಕೊರೋನದಿಂದಾಗಿ ತೊಂದರೆಗೀಡಾದ ಎಂಎಸ್‌ಎಂಇಗಳ ಉತ್ತೇಜನಕ್ಕೆ ಸರಕಾರ ಘೋಷಿಸಿರುವ ಯೋಜನೆ ಗಳು ಸ್ವಾಗತಾರ್ಹ. ಈ ಯೋಜನೆಗಳನ್ನು ಬ್ಯಾಂಕ್‌ಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸರಕಾರ ಗಮನ ಹರಿಸಬೇಕಾಗಿದೆ.
ವಿಶಾಲ್ ಎಲ್. ಸಾಲ್ಯಾನ್, ಅಧ್ಯಕ್ಷರು, ದ.ಕ. ಜಿಲ್ಲಾ ಸಣ್ಣ ಕೈಗಾರಿಕಾ ಸಂಘ (ಡಿಎಸ್‌ಐಎಎಂ)
*ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಶ್ರೀಮಂತರ ಪರ ಬಜೆಟ್ ಆಗಿದೆ. ರೈತ, ಕಾರ್ಮಿಕ, ಆದಾಯ ತೆರಿಗೆ ಕಟ್ಟುವವರಿಗೆ ಹಾಗೂ ಜನಸಾಮಾನ್ಯರಿಗೆ ಯಾವುದೇ ರಿಯಾಯಿತಿ ನೀಡದೆ ಶ್ರೀಮಂತರ ಸೊತ್ತಾದ ವಜ್ರ, ಚಿನ್ನಗಳಿಗೆ ತೆರಿಗೆ ಕಡಿತ ಮಾಡಲಾಗಿದೆ. ಈಗಾಗಲೆ ಗಗನಕ್ಕೇರಿದ ಪೆಟ್ರೋಲ್ ಉತ್ಪನ್ನಗಳ ಬೆಲೆಗಳು ಮತ್ತಷ್ಟು ಏರಲಿವೆ. ಕರ್ನಾಟಕದ ಬೆಳವಣಿಗೆಗೆ ಯಾವುದೇ ಹೊಸ ಯೋಜನೆಗಳು ಈ ಬಜೆಟ್‌ನಲ್ಲಿ ಕಾಣುತ್ತಿಲ್ಲ.
- ವಿ. ಕುಕ್ಯಾನ್, ಕಾರ್ಯದರ್ಶಿ, ಸಿಪಿಐ, ದ.ಕ.ಜಿಲ್ಲೆ
*ಕೊರೋನ ಸಾಂಕ್ರಾಮಿಕ, ಲಾಕ್‌ಡೌನ್‌ಗಳಿಂದ ಬಸವಳಿದಿರುವ ಕಾರ್ಮಿಕರು, ಸಣ್ಣ, ಮಧ್ಯಮ ಉದ್ಯಮಿಗಳು, ವ್ಯಾಪಾರಿಗಳು ಸೇರಿದಂತೆ ಜನಸಾಮಾನ್ಯರಿಗೆ ಪರಿಹಾರ ಒದಗಿಸುವ ನಾಗರಿಕರ ನಿರೀಕ್ಷೆಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಜೆಟ್ ಹುಸಿಗೊಳಿಸಿದೆ. ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು, ಕಿರು ಉದ್ಯಮಿಗಳ ಕೈಗೆ ಹಣ ತಲುಪದೆ ಭಾರತದ ಸದ್ಯದ ಬಿಕ್ಕಟ್ಟು ಪರಿಹಾರ ಆಗುವುದಿಲ್ಲ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದ ಬಜೆಟ್ ಆ ನಿಟ್ಟಿನಲ್ಲಿರಬೇಕಿತ್ತು. ಆದರೆ ಕೇಂದ್ರದ ನರೇಂದ್ರ ಮೋದಿ ಸರಕಾರ ಕಾರ್ಪೊರೇಟ್ ಶ್ರೀಮಂತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟು ಬಜೆಟ್ ಮಂಡಿಸಿದೆ. ಆರೋಗ್ಯ, ಶಿಕ್ಷಣದಂತಹ ಕ್ಷೇತ್ರಗಳನ್ನೂ ಕಡೆಗಣಿಸಲಾಗಿದೆ. ನಿರುದ್ಯೋಗದ ಭೀಕರ ಸ್ಥಿತಿಯಲ್ಲೂ ಉದ್ಯೋಗ ಸೃಷ್ಟಿಯ ಕುರಿತು ಗಮನ ಹರಿಸದಿರುವುದು ಖೇದಕರ.
- ಕೆ.ಯಾದವ ಶೆಟ್ಟಿ, ಕಾರ್ಯದರ್ಶಿ, ಸಿಪಿಎಂ ದ.ಕ. ಜಿಲ್ಲೆ
*ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡುವ ಜನಪರವಾದ ಬಜೆಟ್ ಮಂಡಿಸಿದ್ದಾರೆ. ಕೋವಿಡ್ ಸಂಕಷ್ಟದ ನಡುವೆಯೂ ಬಡ ಹಾಗೂ ಮಧ್ಯಮ ವರ್ಗಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಿದ್ದು, ಎಲ್ಲ ವರ್ಗದ ಜನರು ಮೆಚ್ಚುವಂತಹ ಬಜೆಟ್ ನೀಡಿದ್ದಾರೆ. ಬಡವರ ಬಗ್ಗೆ ವಿಶೇಷ ಕಾಳಜಿಯಿಂದ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳ ನಿರ್ಮಾಣ ಘೋಷಿಸಿದ್ದಾರೆ. ಕೃಷಿಗೆ ವಿಶೇಷ ಆದ್ಯತೆ ನೀಡಲಾ ಗಿದ್ದು, ಸಾವಯವ ಕೃಷಿಯನ್ನು ಉತ್ತೇಜಿಸಲು ನಿರ್ಧರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಅಲ್ಲದೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ರೈತರಿಗೆ ಹೆಚ್ಚಿನ ಸಹಕಾರ ದೊರೆಯಲಿದೆ. ಚಿನ್ನ, ವಜ್ರಾಭರಣ, ಕೃಷಿ ಉಪಕರಣ, ಮೊಬೈಲ್, ಬಟ್ಟೆ, ಚರ್ಮದ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ ಮಾಡುವ ಮೂಲಕ ಮಧ್ಯಮ ವರ್ಗದ ಮೇಲಿನ ಹೊರೆಯನ್ನು ತಗ್ಗಿಸಿದ್ದಾರೆ.
-ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ ಕ್ಷೇತ್ರ
*ಕೇಂದ್ರ ಸರಕಾರದ ತಪ್ಪು ಆರ್ಥಿಕ ನೀತಿಗಳು (ನೋಟ್ ಅಮಾನ್ಯೀಕರಣ, ಅವೈಜ್ಞಾನಿಕ ಜಿಎಸ್‌ಟಿ) ಜೊತೆಗೆ ಕೊರೋನ ಸಮಸ್ಯೆಯಿಂದ ಉಂಟಾದ ಆರ್ಥಿಕ ಕುಸಿತ, ಹೆಚ್ಚಾದ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ ಕಾರಣ ದಿಂದ, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆರ್ಥಿಕ ಸಮಸ್ಯೆಗಳಿಂದ ಕಂಗಾಲಾಗಿದ್ದಾರೆ. ಬೆಲೆ ಎರಿಕೆಯಿಂದ ಕಂಗೆಟ್ಟಿದ್ದಾರೆ. ಇಂತಹ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಜೆಟ್ ಸ್ಪಂದಿಸಬೇಕಿತ್ತು. ಆದರೆ ಏನೂ ಇಲ್ಲದ ಈ ಬಜೆಟ್ ಒಂದು ಸಂಪ್ರದಾಯದಂತೆ ಮಂಡನೆಯಾದ ಅಂಕಿ ಅಂಶಗಳಾಗಿದೆ ಅಷ್ಟೆ. ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಸೋತು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಗಳಿಗೆ ಯಾವ ಪರಿಹಾರ ಘೋಷಿಸಿಲ್ಲ.
- ಜೆ ಆರ್. ಲೋಬೊ., ಮಾಜಿ ಶಾಸಕರು, ಮಂಗಳೂರು ದಕ್ಷಿಣ ಕ್ಷೇತ್ರ
*ಉದ್ಯೋಗ ಸಿಗದೆ ಹತಾಶರಾಗಿರುವ ದೇಶದ ಯುವಜನತೆಗೆ ಉದ್ಯೋಗ ಖಾತ್ರಿಪಡಿಸದೆ ಕೇವಲ ಘೋಷಣೆಗೆ ಸೀಮಿತವಾದ ಬಜೆಟ್ ಇದಾಗಿದೆ. ದೇಶದಲ್ಲಿ ಮೊದಲಬಾರಿ ಅಧಿಕಾರಕ್ಕೇರುವ ಸಂದರ್ಭದಲ್ಲಿ ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಯುವ ಜನರಲ್ಲಿ ಭ್ರಮೆ ಸೃಷ್ಟಿಸಿ ನತರ ಈವರೆಗೂ ಪ್ರಾಮಾಣಿಕವಾಗಿ ಉದ್ಯೋಗ ಸೃಷ್ಟಿಯತ್ತ ಕೆಲಸ ಮಾಡಲಿಲ್ಲ. ಪ್ರತಿಸಲ ಯುವ ಜನರನ್ನು ವಂಚಿಸುವ ಕೆಲಸವನ್ನು ಒಕ್ಕೂಟ ಸರಕಾರ ಮಾಡುತ್ತಿರುವುದು ಅಕ್ಷಮ್ಯ. ನಿರುದ್ಯೋಗ ದರ ಪಾತಾಳ ತಲುಪಿರುವ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಕೊರೋನ ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿರ್ವಹಿಸಲಿಲ್ಲ. ಇರುವ ಉದ್ಯೋಗಗಳನ್ನು ಕಡಿತ ಮಾಡಿ ಜನತೆಯನ್ನು ಬೀದಿಗೆ ತಳ್ಳಿದ ನರೇಂದ್ರ ಮೋದಿ ನೇತೃತ್ವದ ಸರಕಾರ ಈ ಬಜೆಟ್ ಯುವಜನರಿಗೆ ಉದ್ಯೋಗದ ಕುರಿತು ಸಮರ್ಪಕ ಯೋಜನೆ-ಅನುದಾನ ನೀಡದೆ ವಂಚಿಸುತ್ತಿದೆ. ಇದು ದೇಶದ ಜನ ಸಾಮಾನ್ಯರ ಬಜೆಟ್ ಆಗಿರದೆ ಕಾರ್ಪೊರೇಟ್ ವಂಚಕರ ಪರವಾದ ಬಜೆಟ್ ಆಗಿದೆ.
-ಮುನೀರ್ ಕಾಟಿಪಳ್ಳ, ಅಧ್ಯಕ್ಷರು, ಡಿವೈಎಫ್‌ಐ ಕರ್ನಾಟಕ
ಕೇಂದ್ರದ ಬಿಜೆಪಿ ಸರಕಾರ ಕೃಷಿ, ಕೈಗಾರಿಕೆ, ಶಿಕ್ಷಣ, ಮೂಲಸೌಕರ್ಯ ಸಹಿತ ಎಲ್ಲಾ ರಂಗಕ್ಕೂ ಸಮಾನ ಆದ್ಯತೆ ನೀಡಿದೆ. ಅಲ್ಲದೆ ಮಧ್ಯಮ, ಬಡವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ್ ಕನಸಿಗೆ ಪೂರಕವಾದ ಬಜೆಟ್ ಇದಾಗಿದೆ. ಸ್ವದೇಶೀಯ ಉತ್ಪಾದನೆ, ಉದ್ಯೋಗವಕಾಶ, ತಂತ್ರಜ್ಞಾನ ಮತ್ತಿತರ ವಿಚಾರದಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ದೀರ್ಘಕಾಲೀನ ಯೋಚನೆ, ಯೋಜನೆಯ ಬಜೆಟ್ ಇದಾಗಿದೆ.
- ಡಾ. ಭರತ್ ಶೆಟ್ಟಿ
ಶಾಸಕರು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ
* ಮುಂದಿನ 25 ವರ್ಷಗಳ ದೂರದೃಷ್ಟಿಯ ಬಜೆಟ್ ಇದಾಗಿದ್ದು, ಆತ್ಮನಿರ್ಭರ ಭಾರತಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ಕೃಷಿ, ಕೈಗಾರಿಕೆ, ರಕ್ಷಣೆ, ಉದ್ಯೋಗ ಸಷ್ಟಿ, ಡಿಜಿಟಲ್ ಆರ್ಥಿಕತೆ, ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ, ನದಿಗಳ ಜೋಡಣೆ, ಈಶಾನ್ಯ ರಾಜ್ಯಗಳ ಅಭಿವದ್ಧಿಗೆ ವಿಶೇಷ ಒತ್ತು ನೀಡಿರುವುದು ಗಮನಾರ್ಹ.
-ಸುದರ್ಶನ ಎಂ
ಅಧ್ಯಕ್ಷರು, ಬಿಜೆಪಿ ದ.ಕ.ಜಿಲ್ಲೆ
*ಇದೊಂದು ತೀರಾ ಸಪ್ಪೆ ಬಜೆಟ್. ಕೇಂದ್ರ ಸರಕಾರ ಯಾವುದೇ ಹೊಸ ಯೋಜನೆಗಳಿಗೆ ಆದ್ಯತೆ ನೀಡಿಲ್ಲ, ಕೇವಲ ಖರ್ಚು ವೆಚ್ಚಗಳಿಗೆ ಲೇಖಾನುದಾನ ಪಡೆದುಕೊಂಡಂತಿದೆ. ಕೃಷಿ ಮತ್ತು ಪ್ರವಾಸೋದ್ಯಮವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಕರ್ನಾಟಕ ರಾಜ್ಯಕ್ಕೆ ಯಾವುದೇ ಪ್ರಯೋಜನ ಆಗಿಲ್ಲ.
- ಕೆ. ಹರೀಶ್ ಕುಮಾರ್,
ಅಧ್ಯಕ್ಷರು, ಕಾಂಗ್ರೆಸ್ ದ.ಕ.ಜಿಲ್ಲೆ
ಈ ಬಾರಿಯ ಕೇಂದ್ರ ಬಜೆಟ್ ಬಗ್ಗೆ ನಿರೀಕ್ಷೆಗಳು ಹುಸಿಯಾಗಿವೆ. ಇದೊಂದು ನೀರಸ ಬಜೆಟ್. ಬಡವರು, ಮಧ್ಯಮ ವರ್ಗದವರಿಗೆ ಯಾವುದೇ ರೀತಿಯ ಪ್ರಯೋಜನ ಇಲ್ಲ.
-ಬಿ. ರಮಾನಾಥ ರೈ,
ಮಾಜಿ ಸಚಿವರು, ಕಾಂಗ್ರೆಸ್ ಮುಖಂಡರು
ಕೋವಿಡ್ ಮಹಾಮಾರಿಯ ಈ ಕಠಿಣ ಸಂದರ್ಭದಲ್ಲಿ ಕುಸಿದಿರುವ ಆರ್ಥಿಕತೆಯ ಪುನಶ್ಚೇತನಕ್ಕೆ ಅವಶ್ಯಕವಾಗಿರುವ ಬೂಸ್ಟರ್ ಲಸಿಕೆ ನೀಡಿರುವ ಅತ್ಯಂತ ಭರವಸೆಯ ಸಂತುಲಿತ ಸ್ವಾಗತರ್ಹ ಬಜೆಟ್ ಇದಾಗಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ 2014ರಿಂದ ಪ್ರಾರಂಭಿಸಿರುವ ಆರ್ಥಿಕ ಸುಧಾರಣೆಯ ಪ್ರಕ್ರಿಯೆಗಳಿಗೆ ಗತಿಶಕ್ತಿ ನೀಡಿ ದೇಶವನ್ನು ಆತ್ಮ ನಿರ್ಭರತೆಯತ್ತ ಕೊಂಡೊಯ್ಯುವ ದೂರದೃಷ್ಟಿಯ ಬಜೆಟ್ ಮಂಡಿಸಲಾಗಿದೆ.
- ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ವಕ್ತಾರರು ರಾಜ್ಯ ಬಿಜೆಪಿ, ಮಾಜಿ ಸದಸ್ಯರು, ವಿಧಾನ ಪರಿಷತ್