ಮುಡಾ ನಿವೇಶನ ಹಗರಣ: ಶಾಸಕ ಪುಟ್ಟರಾಜು ಅರ್ಜಿ ಹೈಕೋರ್ಟ್‍ನಿಂದ ವಜಾ

ಬೆಂಗಳೂರು, ಫೆ.1: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದ(ಮುಡಾ) ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ರದ್ದು ಕೋರಿ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಸಿ.ಎಸ್.ಪುಟ್ಟರಾಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಹಾಗೂ ಕೆಪಿಸಿಸಿ ಸದಸ್ಯ ಟಿ.ಎಸ್. ಸತ್ಯಾನಂದ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಸುಮಾರು 107 ನಿವೇಶನಗಳನ್ನು ನಿಯಮಬಾಹಿರವಾಗಿ ಹಂಚಿಕೆ ಮಾಡಿದೆ ಎಂದು ಆರೋಪಿಸಿದ್ದರು. 2011ರಲ್ಲಿ ಬೆಳಕಿಗೆ ಬಂದ ಈ ಹಗರಣವನ್ನು ಸರಕಾರ ಸಿಬಿಐ ತನಿಖೆಗೆ ವಹಿಸಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಪುಟ್ಟರಾಜು ಅವರ ಪತ್ನಿ ಈ ಮೊದಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದಿದ್ದರು. ಇದನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದಲೂ ನಿವೇಶನ ಪಡೆದಿದ್ದಾರೆ ಎಂದು ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಪುಟ್ಟರಾಜು, ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ 2018ರಲ್ಲಿ ಆಗಿರುವ ತಿದ್ದುಪಡಿ ಪ್ರಕಾರ ಶಾಸಕರ ವಿರುದ್ಧದ ಪ್ರಕರಣದಲ್ಲಿ ತನಿಖೆ ನಡೆಸಲು ಹೊಸದಾಗಿ ಪೂರ್ವಾನುಮತಿ ಪಡೆಯಬೇಕಿತ್ತು. ಆದರೆ, ಪೂರ್ವಾನುಮತಿ ಪಡೆಯದೆ ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಯಲ ಸಿಬಿಐ ದೂರನ್ನು ಸಂಜ್ಞೇಯ ಅಪರಾಧ ಎಂದು ಪರಿಗಣಿಸಿರುವುದು ಕಾನೂನು ಬಾಹಿರ. ಹೀಗಾಗಿ, ವಿಚಾರಣಾ ನ್ಯಾಯಾಲಯದಲ್ಲಿನ ದೂರನ್ನು ವಜಾಗೊಳಿಸಬೇಕು ಎಂದು ಕೋರಿದ್ದರು.
ವಾದ ಒಪ್ಪದ ಪೀಠ, ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಪ್ರಕಾರ ಸಾರ್ಜಜನಿಕ ಸೇವೆಯ ಚುನಾಯಿತ ಜನಪ್ರತಿನಿಧಿಗೆ ಆತನ ಸದಸ್ಯತ್ವ ಅವಧಿ ಮುಗಿದ ನಂತರ ತನಿಖೆಗೆ ಪೂರ್ವಾನುಮತಿ ಬೇಕಿಲ್ಲ. ತಿದ್ದುಪಡಿಯಲ್ಲಿ ಪೂರ್ವಾನುಮತಿ ಅವಶ್ಯಕತೆ ಇದೆ. ಆದರೆ, ಇದು 2018ಕ್ಕೂ ಮೊದಲೇ ನಡೆದ ಅಪರಾಧಕ್ಕೆ ಅನ್ವಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.







