ಕನ್ನಡ ರೇಡಿಯೋ ವಾಹಿನಿಗಳನ್ನು ಮುಚ್ಚುವುದು ಕನ್ನಡಿಗರಿಗೆ ಆಗುತ್ತಿರುವ ಅವಮಾನವಾಗಿದೆ: ಕರವೇ ಆಕ್ರೋಶ

ಕರವೇ ಪ್ರತಿಭಟನೆ
ಬೆಂಗಳೂರು, ಫೆ.1: ಕನ್ನಡದ ರೇಡಿಯೋ ವಾಹಿನಿಗಳನ್ನು ರಾಷ್ಟ್ರೀಯ ರೇಡಿಯೋ ವಾಹಿನಿಯೊಂದಿಗೆ ವಿಲೀನಗೊಳಿಸುವ ಹೆಸರಿನಲ್ಲಿ ಕನ್ನಡ ರೇಡಿಯೋ ವಾಹಿನಿಗಳನ್ನು ಮುಚ್ಚುತ್ತಿರುವುದು ಕನ್ನಡಿಗರಿಗೆ ಆಗುತ್ತಿರುವ ಅವಮಾನವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ.
ಮಂಗಳವಾರ ರಾಜಭವನ ರಸ್ತೆಯಲ್ಲಿರುವ ಆಕಾಶವಾಣಿ ಮುಂಭಾಗ ಪ್ರತಿಭಟನೆ ಮಾಡಿ ಮಾತನಾಡಿದ ಅವರು, ಎಫ್ಎಂ ರೇನ್ಬೋ ರೇಡಿಯೋ ಆಕಾಶವಾಣಿಯ ಅಮೃತವರ್ಷಿಣಿ ವಾಹಿನಿಯನ್ನು ರಾಗಂ ರಾಷ್ಟ್ರೀಯ ವಾಹಿನಿಯೊಂದಿಗೆ ವಿಲೀನ ಮಾಡಿ ಕನ್ನಡಿಗರಿಗೆ ಧಕ್ಕೆ ಮಾಡಲಾಗಿದೆ. ಈಗ ಎಫ್ಎಂ ರೈನ್ಬೋ ಕನ್ನಡ ಕಾಮನಬಿಲ್ಲು ರೇಡಿಯೋ ವಾಹಿನಿಯನ್ನು ಸಹ ಬೇರೊಂದು ರಾಷ್ಟ್ರೀಯ ವಾಹಿನಿ ಜೊತೆಗೆ ವಿಲೀನ ಮಾಡಲಾಗುತ್ತಿದೆ. ಈ ಮೂಲಕ ಕನ್ನಡಿಗರ ಭಾವಗೀತೆ ಸೇರಿದಂತೆ ಚಿತ್ರಗೀತೆಗಳನ್ನು ಪ್ರಸಾರ ಮಾಡುವ ಕನ್ನಡ ರೇಡಿಯೋ ವಾಹಿನಿಯನ್ನು ಮುಚ್ಚಲಾಗುತ್ತಿದೆ. ಇದು ಪ್ರಸಾರ ಭಾರತಿಯು ಕನ್ನಡಿಗರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಹೇಳಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ವಿಲೀನ ಧೋರಣೆಗಳು ನೂರಾರು ಜನರ ಉದ್ಯೋಗವನ್ನು ಕಳೆದುಕೊಳ್ಳುವಂತೆ ಮಾಡುತ್ತವೆ. ಅಲ್ಲದೇ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಹಾಗಾಗಿ ಎಫ್.ಎಂ. ರೈನ್ಬೋ ಕನ್ನಡ ಕಾಮನಬಿಲ್ಲು ರೇಡಿಯೋ ವಾಹಿನಿಯನ್ನು ಮುಚ್ಚಬಾರದು ಎಂದು ಇಂದು ಸಾಂಕೇತಿಕವಾಗಿ ಪ್ರತಿಭಟನೆಯನ್ನು ಮಾಡಲಾಗಿದೆ. ಪ್ರಸಾರಭಾರತಿಯು ತನ್ನ ನಿಲುವನ್ನು ಬದಲಿಸಿಕೊಳ್ಳದಿದ್ದರೆ, ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನೂರಾರು ಕರವೇ ಕಾರ್ಯಕರ್ತರು ಭಾಗವಹಿಸಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.
.jpg)







