ಮಡಿಕೇರಿ: ಅಕ್ರಮ ಮರಳುಗಾರಿಕೆ; ಆರೋಪಿ ಸಹಿತ ಲಾರಿ ವಶ

ಮಡಿಕೇರಿ ಫೆ.1 : ಕಿರು ನದಿಯಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟಕ್ಕೆ ಯತ್ನಿಸುತ್ತಿದ್ದ ಮಿನಿಲಾರಿ ಮತ್ತು ತೆಪ್ಪವನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದು, ಲಾರಿ ಚಾಲಕನನ್ನು ಬಂಧಿಸಿದ್ದಾರೆ. ಮಡಿಕೇರಿ ತಾಲೂಕು ನಾಪೋಕ್ಲು ಪಾಲೂರು ನಿವಾಸಿ ಟಿಪ್ಪರ್ ಲಾರಿ ಚಾಲಕ ವಿ.ಆರ್. ದಕ್ಷಿತ್(22) ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಬಂಧಿತನಾದ ವ್ಯಕ್ತಿಯಾಗಿದ್ದಾನೆ. ಪ್ರಕರಣದಲ್ಲಿ ಭಾಗಿಗಳಾಗಿರುವ ಇತರ ಆರೋಪಿಗಳಾದ ಶಾಂತಪ್ಪ ರೈ ಮತ್ತು ಎಂ.ಜೀವನ್ ಎಂಬವರು ತಲೆಮರೆಸಿಕೊಂಡಿದ್ದಾರೆ.
ಕೆದಮುಳ್ಳೂರು ಗ್ರಾಮದ ಕಿರುಹೊಳೆ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಾಟಕ್ಕೆ ಯತ್ನ ಮಾಡುತ್ತಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸಿದ್ದಲಿಂಗ ಬಿ.ಬಾಣಾಸೆ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ಸಿಬ್ಬಂದಿಗಳೋಂದಿಗೆ ಸ್ಥಳಕ್ಕೆ ತೆರಳಿದ ಸಂದರ್ಭ ನದಿ ಪಾತ್ರದಿಂದ ಅಕ್ರಮವಾಗಿ ಮರಳು ತೆಗೆದು ಟಿಪ್ಪರ್ ಲಾರಿಯಲ್ಲಿ ತುಂಬಿಸಿ ಸಾಗಾಟಕ್ಕೆ ಸಿದ್ದಗೊಳಿಸಿರುವುದು ಪತ್ತೆಯಾಗಿತ್ತು. ಈ ಸಂದರ್ಭ ಸ್ಥಳದಲ್ಲಿದ್ದ ಕಾರ್ಮಿಕರು ಮತ್ತು ಇತರರು ಪರಾರಿಯಾಗಿದ್ದಾರೆ. ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಮಿನಿ ಟಿಪ್ಪರ್ ಲಾರಿ(ಕೆಎ-12.ಬಿ-9808), 10 ಸಾವಿರ ರೂ ಮೌಲ್ಯದ ಮರಳು ಸೇರಿದಂತೆ 20 ಸಾವಿರ ಮೌಲ್ಯದ ಕಬ್ಬಿಣದ ತೆಪ್ಪ ವನ್ನು ವಶಕ್ಕೆ ಪಡೆದಿದ್ದಾರೆ.
ವಿರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಮಾರ್ಗದರ್ಶನದಲ್ಲಿ ವೃತ್ತ ನೀರಿಕ್ಷಕ ಬಿ.ಎಸ್ ಶ್ರೀಧರ್ ನಿರ್ದೇಶನದ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿ ಸಿ.ಶ್ರೀಧರ್, ಸಿಬ್ಬಂದಿಗಳಾದ ರಾಮಪ್ಪ, ತೀರ್ಥಕುಮಾರ್, ಮೂರ್ತಿ ಹೆಚ್.ಎಂ., ಶ್ರೀಕಾಂತ್ ಕೆಂದೂರ ಮತ್ತು ಸಂದೀಪ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.







