ಯು-19 ವಿಶ್ವಕಪ್: ಫೈನಲ್ಗೆ ಭಾರತ ಲಗ್ಗೆ

Photo: Twitter/@BCCI
ಬಾರ್ಬಡೋಸ್: ಧುಲ್ ಮತ್ತು ರಶೀದ್ ಅವರ 204 ರನ್ಗಳ ಭರ್ಜರಿ ಜತೆಯಾಟದ ನೆರವಿನಿಂದಾಗಿ ಯು-19 ವಿಶ್ವಕಪ್ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾವನ್ನು 96 ರನ್ನುಗಳಿಂದ ಬಗ್ಗುಬಡಿದ ಭಾರತ ತಂಡ ಫೈನಲ್ ಪ್ರವೇಶಿಸಿದೆ.
ಫೈನಲ್ನಲ್ಲಿ ಭಾರತದ ಯುವಪಡೆ ಇಂಗ್ಲೆಡ್ನ ಸವಾಲು ಎದುರಿಸಲಿದೆ.
ಆಸ್ಟ್ರೇಲಿಯಾ ತಂಡಕ್ಕೆ 291 ಸವಾಲು ನೀಡಿದ ಭಾರತದ ಬೌಲಿಂಗ್ ವಿಭಾಗದಲ್ಲಿ ಮಿಂಚಿದ ವಿಕಿ ಓಸ್ವಾಲ್ (42ಕ್ಕೆ 3) ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕ್ಯಾಂಪ್ಬೆಲ್ ಕೆಲ್ಲವೇ, ವಿಲಿಯಂ ಸಲ್ಝ್ಮನ್ ಮತ್ತು ಟೊಬಿಯಾಸ್ ಸ್ನೇಲ್ ಅವರ ವಿಕೆಟ್ ಕಬಳಿಸುವ ಮೂಲಕ ಭಾರತದ ಮೇಲುಗೈಗೆ ಅವರು ನೆರವಾದರು.
ರವಿ ಕುಮಾರ್, ನಿಶಾಂತ್ ಸಿಧು ಕೂಡಾ ಮಧ್ಯಮ ಓವರ್ಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿ ತಲಾ 2 ವಿಕೆಟ್ ಕೀಳುವ ಮೂಲಕ ಎದುರಾಳಿಗಳು ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಉಳಿದ ವಿಕೆಟ್ಗಳನ್ನು ಆಂಗ್ರಿಶ್ ರಘುವಂಶಿ ಮತ್ತು ಕುಶಾಲ್ ತಾಂಬೆ ಹಂಚಿಕೊಂಡರು.
ಆಸ್ಟ್ರೇಲಿಯ 41.5 ಓವರ್ಗಳಲ್ಲಿ 194 ರನ್ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಭಾರತ ತಂಡ ಸತತ ನಾಲ್ಕನೇ ಬಾರಿಗೆ ಮತ್ತು ಒಟ್ಟು ಎಂಟನೇ ಬಾರಿ ಟೂರ್ನಿಯ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಪರ ಶೇಕ್ ರಶೀದ್ (94) ಮತ್ತು ಯಶ್ ಧುಲ್ (110) ಅವರು 204 ರನ್ಗಳ ಜತೆಯಾಟದೊಂದಿಗೆ ಭಾರತ 290 ರನ್ಗಳ ಬೃಹತ್ ಮೊತ್ತ ಪೇರಿಸಲು ಕಾರಣರಾದರು. ಕೊನೆಯ ಓವರ್ಗಳಲ್ಲಿ ನಿಶಾಂತ್ ಸಿಧು (ನಾಟೌಟ್ 12) ಮತ್ತು ದಿನೇಶ್ ಬಾನಾ (ನಾಟೌಟ್ 20) ಅವರ ಮಿಂಚಿನ ಆಟ ಕೂಡಾ ಭಾರತದ ಮೊತ್ತ ಹಿಗ್ಗಲು ಕಾರಣವಾಯಿತು.