ಉಡುಪಿ ಜಿಲ್ಲೆ; ಕೋವಿಡ್ ಗೆ ಮತ್ತೆ ಮೂವರು ಬಲಿ: 309 ಮಂದಿಗೆ ಕೊರೋನ ಪಾಸಿಟಿವ್

ಉಡುಪಿ, ಫೆ.3: ಗುರುವಾರ ಸಹ ಜಿಲ್ಲೆಯಲ್ಲಿ ಮೂವರು ಪುರುಷರು ಕೋವಿಡ್ ಸೋಂಕಿನಿಂದ ಮೃತಪಟ್ಟಿದಾರೆ. ಇಂದು 309 ಮಂದಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ 898 ಮಂದಿ ಕೋವಿಡ್‌ನಿಂದ ಗುಣಮುಖ ರಾದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 2696ಕ್ಕಿಳಿದಿದೆ.
ಇಂದು ಉಡುಪಿ ತಾಲೂಕಿನ 78, 85 ಹಾಗೂ 87 ವರ್ಷ ಪ್ರಾಯದ ಹಿರಿಯ ನಾಗರಿಕರು ಸೋಂಕಿನಿಂದ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರೆಲ್ಲರೂ ಕೋವಿಡ್‌ನ ಸಾಮಾನ್ಯ ಗುಣಲಕ್ಷಣ ದೊಂದಿಗೆ, ಉಸಿರಾಟದ ತೊಂದರೆ, ನ್ಯುಮೋನಿಯಾ ಹಾಗೂ ಹೃದಯ ಸಮಸ್ಯೆ ಸೇರಿದಂತೆ ಇತರ ಗಂಭೀರ ಸಮಸ್ಯೆಗಳಿಂದ ನರಳುತಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 506ಕ್ಕೇರಿದೆ.
ಇಂದು ಪಾಸಿಟಿವ್ ಬಂದ 309 ಮಂದಿಯಲ್ಲಿ 161ಮಂದಿ ಪುರುಷರು ಹಾಗೂ 148 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 181 ಮಂದಿ ಉಡುಪಿ ತಾಲೂಕಿಗೆ, 75 ಮಂದಿ ಕುಂದಾಪುರ ಹಾಗೂ 47 ಮಂದಿ ಕಾರ್ಕಳ ತಾಲೂಕಿಗೆ ಸೇರಿದವರು. ಉಳಿದ ಆರು ಮಂದಿ ಹೊರಜಿಲ್ಲೆಯವರು.
ಪಾಸಿಟಿವ್ ಬಂದವರಲ್ಲಿ 10 ಮಂದಿಯನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲಾಗಿದೆ. 13 ಮಂದಿಯನ್ನು ಕೋವಿಡ್ ಆಸ್ಪತ್ರೆಗೂ, 8 ಮಂದಿಯನ್ನು ಕೋವಿಡ್ ಹೆಲ್ತ್ ಆಸ್ಪತ್ರೆಗೆ ಸೇರಿಸಿದ್ದು, ಉಳಿದ 278 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ 144ಕ್ಕಿಳಿದಿದೆ. ಇವರಲ್ಲಿ 8 ಮಂದಿ ವೆಂಟಿಲೇಟರ್, 16 ಮಂದಿ ಐಸಿಯು ಹಾಗೂ 34 ಮಂದಿ ಎಚ್‌ಡಿಯು ಚಿಕಿತ್ಸೆಯಲ್ಲಿದ್ದಾರೆ.
ಬುಧವಾರ 898 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೋನ ದಿಂದ ಜ.1ರ ನಂತರ ಚೇತರಿಸಿ ಕೊಂಡವರ ಸಂಖ್ಯೆ 14362ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 3101 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿ್ ಬಂದವರ ಸಂಖ್ಯೆ 16937ಕ್ಕೇರಿದೆ.
3253 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 3253 ಮಂದಿ ಕೋವಿಡ್ ನಿಯಂತ್ರಣಕ್ಕಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 596 ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ದಿನದಲ್ಲಿ 60 ವರ್ಷ ಮೇಲಿನ 524 ಮಂದಿ ಬೂಸ್ಟರ್ ಡೋಸ್ ಪಡೆದಿದ್ದಾರೆ. ಇನ್ನು 15-18ವರ್ಷದೊಳಗಿನ 41 ಮಂದಿ ಮೊದಲ ಡೋಸ್ ಹಾಗೂ 955 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಒಟ್ಟು 333 ಮಂದಿ ಮೊದಲ ಡೋಸ್ ಹಾಗೂ 2324 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.