ಆಳಸಮುದ್ರ ಅಕ್ರಮ ಮೀನುಗಾರಿಕೆಗೆ ಕಡಿವಾಣ ಹಾಕಲು ದ.ಕ. ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು, ಫೆ.3: ಸಾಂಪ್ರದಾಯಿಕ ನಾಡದೋಣಿಗಳು ಬಲೆ ಹಾಕಿ ದುಡಿಯುವ ಸಮುದ್ರದ ದಡ ಭಾಗದಲ್ಲಿ ಡೀಪ್ ಫಿಶಿಂಗ್ (ಆಳ ಸಮುದ್ರ) ಬೋಟುಗಳು ನಡೆಸುವ ಅಕ್ರಮ ಮೀನುಗಾರಿಕೆಗೆ ಕಡಿವಾಣ ಹಾಕಬೇಕು ಮತ್ತು ನಾಡದೋಣಿ ಮೀನುಗಾರರು ಎದುರಿಸುವ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಫಲ್ಗುಣಿ ಮೀನುಗಾರರ ಸಂಘ ಬೆಂಗರೆ ಇದರ ಅಧ್ಯಕ್ಷ ಅಬ್ದುಲ್ ತಯ್ಯೂಬ್ ನೇತೃತ್ವದ ನಿಯೋಗ ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಕಳೆದ ಎರಡು ತಿಂಗಳುಗಳಿಂದ ನಿರಂತರವಾಗಿ ನಾಡದೋಣಿಗಳು ಮೀನುಗಾರಿಕೆ ನಡೆಸುವ ಕಡಲ ತೀರ ಭಾಗದಲ್ಲಿ ಆಳ ಸಮುದ್ರದ ಬೋಟುಗಳು ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆ. ನಿಯಮಗಳ ಪ್ರಕಾರ 10 ನಾಟಿಕಲ್ ಮೈಲು ಒಳಗಡೆ ಮೀನುಗಾರಿಕೆ ನಡೆಸಲು ಅವರಿಗೆ ಅವಕಾಶವಿಲ್ಲ. ಹಾಗಿದ್ದರೂ ತೀರಪ್ರದೇಶಕ್ಕೆ ಬಂದು ಡೀಪ್ ಬೋಟುಗಳು ಮೀನುಗಾರಿಕೆ ನಡೆಸುತ್ತಿವೆ. ಅಲ್ಪ ಪ್ರಮಾಣದಲ್ಲಿ ಸಣ್ಣ ದೋಣಿಯವರಿಗೆ ದೊರೆಯುವ ಮೀನುಗಳನ್ನು ತಮ್ಮ ದೊಡ್ಡ ಬಲೆಗಳಲ್ಲಿ ಎಳೆಯುತ್ತಾರೆ. ಅದಲ್ಲದೆ ಈಗಾಗಲೇ ದೊಡ್ಡ ಡೀಪ್ ಬೋಟುಗಳು ಟ್ರಾಲ್ ಎಳೆಯುವ ಸಂದರ್ಭಗಳಲ್ಲಿ ಅದೆಷ್ಟೋ ಸಣ್ಣ ದೋಣಿಯವರು ತೀರ ಭಾಗದಲ್ಲಿ ಹಾಕಿದ ಬಲೆಗಳನ್ನು ಕೂಡ ಎಳೆದು ಹೋಗುತ್ತಾರೆ ಎಂದು ನಿಯೋಗ ತಿಳಿಸಿದೆ.
ಹೆಚ್ಚಾಗಿ ಕೇರಳದ ಡೀಪ್ ಬೋಟುಗಳು ರಾತ್ರಿ ವೇಳೆ ಮಂಗಳೂರು ಭಾಗಕ್ಕೆ ಬಂದು ಬೆಳಗ್ಗಿನವರೆಗೂ ಬಲೆ ಎಳೆಯುತ್ತಾರೆ. ಇಲ್ಲಿ ತೀರ ಭಾಗದಲ್ಲಿ ನಾಡದೋಣಿಯವರು ದುಡಿಯುವ ಜಾಗದ ಮೀನು ಕೇರಳದ ಡೀಪ್ ಬೋಟುಗಳ ಪಾಲಾಗುತ್ತಿದೆ. ಈ ನಿಯಮ ಬಾಹಿರ ಮೀನುಗಾರಿಕೆಯಿಂದ ಸಣ್ಣ ನಾಡ ದೋಣಿಯವರು ಮೀನುಗಾರಿಕೆ ವೃತ್ತಿ ನಡೆಸುವುದೇ ಅಸಾಧ್ಯವಾಗಿದೆ. ಕರಾವಳಿ ಕಾವಲು ಪಡೆಯು ಇದ್ದೂ ಇಲ್ಲದಂತಾಗಿದೆ. ಹಾಗಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ನಿಯೋಗ ಎಚ್ಚರಿಸಿದೆ.