2020ರ ಅಂತ್ಯದಲ್ಲಿ 4.83 ಲಕ್ಷ ಭಾರತೀಯರು ಜೈಲುಗಳಲ್ಲಿ ಕೊಳೆಯುತ್ತಿದ್ದರು:ಎನ್‌ಸಿಆರ್‌ಬಿ
ಶೇ.76ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳು

ಹೊಸದಿಲ್ಲಿ,ಫೆ.3: ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ)ವು ಬಹಿರಂಗಗೊಳಿಸಿರುವ ಅಂಕಿಅಂಶಗಳಂತೆ 2020ರ ಅಂತ್ಯದ ವೇಳೆಗೆ ದೇಶಾದ್ಯಂತದ ಜೈಲುಗಳಲ್ಲಿ 4.83 ಲಕ್ಷ ಭಾರತೀಯರಿದ್ದರು. ಈ ಪೈಕಿ ಶೇ.76ಕ್ಕೂ ಅಧಿಕ ವಿಚಾರಣಾಧೀನ ಕೈದಿಗಳಾಗಿದ್ದು,ಶಿಕ್ಷೆಗೊಳಗಾದ ಕೈದಿಗಳ ಸಂಖ್ಯೆ ಶೇ.23ರಷ್ಟಿತ್ತು. 3,549 (ಶೇ.1ಕ್ಕೂ ಕಡಿಮೆ) ಕೈದಿಗಳು ವಿವಿಧ ಜೈಲುಗಳಲ್ಲಿ ಸ್ಥಾನಬದ್ಧತೆಯಲ್ಲಿ ಇರಿಸಲ್ಪಟ್ಟಿದ್ದರು ಎಂದು ಎಂದು ಎನ್‌ಸಿಆರ್‌ಬಿ ತನ್ನ ವಾರ್ಷಿಕ ‘ಜೈಲು ಅಂಕಿಅಂಶಗಳು ಭಾರತ 2020’ ವರದಿಯಲ್ಲಿ ತಿಳಿಸಿದೆ.
2020ರ ಅಂತ್ಯದ ವೇಳೆಗೆ ದೇಶಾದ್ಯಂತ ಜೈಲುಗಳಲ್ಲಿ 4,926 ವಿದೇಶಿ ಮೂಲದ ಕೈದಿಗಳೂ ಇದ್ದರು. ವಿಚಾರಣಾಧೀನ ಕೈದಿಗಳ ಪೈಕಿ ಹೆಚ್ಚಿನವರು 18ರಿಂದ 30 ವರ್ಷ ವಯೋಮಾನದವರಾಗಿದ್ದರೆ, ಶಿಕ್ಷೆಗೊಳಗಾದ ಹೆಚ್ಚಿನ ಕೈದಿಗಳು 30 ರಿಂದ 50 ವರ್ಷ ವಯೋಗುಂಪಿಗೆ ಸೇರಿದ್ದರು. ಒಟ್ಟು ಕೈದಿಗಳ ಪೈಕಿ 1.11 ಲಕ್ಷ (ಶೇ.23.04) ಜನರು ಶಿಕ್ಷೆಗೊಳಗಾದವರಾಗಿದ್ದರೆ,ವಿಚಾರಣಾಧೀನ ಕೈದಿಗಳ ಸಂಖ್ಯೆ 3.68 ಲ.(ಶೇ.76.17) ಮತ್ತು ಸ್ಥಾನಬದ್ಧತೆಯಲ್ಲಿದ್ದವರ ಸಂಖ್ಯೆ 3,549 (ಶೇ.0.73) ಆಗಿತ್ತು ಎಂದು ವರದಿಯು ತಿಳಿಸಿದೆ.
4.83 ಲ.ಕೈದಿಗಳ ಪೈಕಿ ಶೇ.96ರಷ್ಟು ಪುರುಷರು,ಶೇ.3.98ರಷ್ಟು ಮಹಿಳೆಯರು ಮತ್ತು ಶೇ.0.01 (70) ತೃತೀಯ ಲಿಂಗಿಗಳಾಗಿದ್ದರು.
ದೇಶದಲ್ಲಿಯ ಒಟ್ಟು ಕೈದಿಗಳ ಪೈಕಿ ಉತ್ತರ ಪ್ರದೇಶದ ಜೈಲುಗಳಲ್ಲಿ ಅತ್ಯಂತ ಹೆಚ್ಚು ಅಂದರೆ (1.06 ಲ.- ಶೇ.22.1) ಕೈದಿಗಳಿದ್ದರೆ,ನಂತರದ ಸ್ಥಾನಗಳಲ್ಲಿ ಬಿಹಾರ (51,849-ಶೇ.10.7) ಮತ್ತು ಮಧ್ಯಪ್ರದೇಶ (45,456-ಶೇ.9.4) ಇದ್ದವು.
ಶಿಕ್ಷೆಗೊಳಗಾದವರ ಪೈಕಿ ಅತ್ಯಂತ ಹೆಚ್ಚಿನ ಕೈದಿಗಳು ಉ.ಪ್ರದೇಶ (26,607-ಶೇ.23.9)ದಲ್ಲಿದ್ದರೆ,ಮಧ್ಯಪ್ರದೇಶ (13,641-ಶೇ.12.2) ಮತ್ತು ಬಿಹಾರ (7,730-ಶೇ.6.9) ನಂತರದ ಸ್ಥಾನಗಳಲ್ಲಿದ್ದವು.
ಶಿಕ್ಷೆಗೊಳಗಾದವರ ಪೈಕಿ 55,653(ಶೇ.49.9) ಕೈದಿಗಳು 30ರಿಂದ 50 ವರ್ಷ,31,935 (ಶೇ.28.7) ಕೈದಿಗಳು 18ರಿಂದ 30ವರ್ಷ ಮತ್ತು 23,856 (ಶೇ.21.4) ಕೈದಿಗಳು 50 ವರ್ಷ ಮತ್ತು ಹೆಚ್ಚಿನ ವಯೋಗುಂಪುಗಳಿಗೆ ಸೇರಿದ್ದರು.
ಉ.ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ (80,867-ಶೇ.21.8) ವಿಚಾರಣಾಧೀನ ಕೈದಿಗಳಿದ್ದರೆ,ನಂತರದ ಸ್ಥಾನಗಳಲ್ಲಿ ಬಿಹಾರ (44,113-ಶೇ.12) ಮತ್ತು ಮಧ್ಯಪ್ರದೇಶ (31,695-ಶೇ.8.6) ಇದ್ದವು. ವಿಚಾರಣಾಧೀನ ಕೈದಿಗಳ ಪೈಕಿ ಅತ್ಯಂತ ಹೆಚ್ಚಿನವರು (1.79 ಲ.-ಶೇ.48.8) 18ರಿಂದ 30ವರ್ಷ,1.49 ಲ (ಶೇ.40.6) ಕೈದಿಗಳು 30ರಿಂದ 50 ವರ್ಷ,39,136 (ಶೇ.10.6)ಕೈದಿಗಳು 50 ವರ್ಷ ಮತ್ತು ಹೆಚ್ಚಿನ ವಯೋಗುಂಪುಗಳಿಗೆ ಸೇರಿದ್ದರು ಎಂದು ಎನ್‌ಸಿಆರ್‌ಬಿ ವರದಿಯಲ್ಲಿ ತಿಳಿಸಿದೆ.







