ಹಿಜಾಬ್ ವಿವಾದ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್, ಶಾಸಕ ರಘುಪತಿ ಭಟ್ ಪ್ರತಿವಾದಿ

ಬೆಂಗಳೂರು, ಫೆ.3: ಉಡುಪಿ ಸರಕಾರಿ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿರುವ ಕಾಲೇಜಿನ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.
ಉಡುಪಿ ಶಾಸಕ ರಘುಪತಿ ಭಟ್ ಅವರು ಕಾನೂನುಬಾಹಿರವಾಗಿ ಕಾಲೇಜಿನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆಕ್ಷೇಪಿಸಲಾಗಿದ್ದು, ಪ್ರಕರಣದಲ್ಲಿ ಶಾಸಕ ರಘುಪತಿ ಭಟ್, ಶಿಕ್ಷಣ ಇಲಾಖೆ ಕಾರ್ಯದರ್ಶಿ, ಪದವಿಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕರು, ಉಡುಪಿ ಜಿಲ್ಲಾಧಿಕಾರಿ, ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಯಶ್‍ಪಾಲ್ ಸುವರ್ಣ ಮತ್ತಿತರರನ್ನು ಪ್ರತಿವಾದಿಗಳನ್ನಾಗಿ ಸೇರಿಸಲಾಗಿದೆ.
ಇದನ್ನೂ ಓದಿ: ಕುಂದಾಪುರ: ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಗೇಟಿನಲ್ಲಿಯೇ ತಡೆ
ಕಾಲೇಜಿನ ವಿದ್ಯಾರ್ಥಿನಿ ರೇಷ್ಮಾ ಫಾರೂಕ್ ಅವರ ತಾಯಿ ರಹ್ಮತ್ ಫಾರೂಕ್ ಹಾಗೂ ಆಯೇಷಾ ಹಾಜಿರಾ ಅಲ್ಮಾಸ್ ಅವರ ತಾಯಿ ಸಾದಿಯಾ ಬಾನು ಸಹಿತ ಐವರು ವಿದ್ಯಾರ್ಥಿನಿಯರ ಪೋಷಕರು ಸಲ್ಲಿಸಿರುವ ಪ್ರತ್ಯೇಕ ಎರಡು ತಕರಾರು ಅರ್ಜಿಗಳು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿದ್ದವು.
ವಿಚಾರಣೆ ವೇಳೆ ಸರಕಾರದ ಪರ ವಕೀಲರು ಹಾಜರಾಗಿ, ಪ್ರಕರಣದಲ್ಲಿ ಅಡ್ವೋಕೇಟ್ ಜನರಲ್ ವಾದ ಮಂಡಿಸಲಿದ್ದಾರೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ವಿದ್ಯಾರ್ಥಿಗಳ ಪರ ವಾದಿಸಿದ ವಕೀಲರು, ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು. ವಿದ್ಯಾರ್ಥಿನಿಯರನ್ನು ತರಗತಿಗೆ ಸೇರಿಸಿಕೊಳ್ಳುತ್ತಿಲ್ಲ. ಇದರಿಂದ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ವಿವರಣೆ ನೀಡಲು ರಾಜ್ಯ ಸರಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಫೆ.8ಕ್ಕೆ ಮುಂದೂಡಿತು.







