ಕೊಲೆಗೆ ಸಂಚು ಪ್ರಕರಣದ ಆರೋಪಿಯ ಜಾಮೀನು ರದ್ಧತಿಗೆ ಆಗ್ರಹ
ಉಡುಪಿ, ಫೆ.3: ನನ್ನ ಕೊಲೆಗೆ ಸಂಚು ರೂಪಿಸಿದ ಪ್ರಕರಣದ ಆರೋಪಿಯಾಗಿ ಕಂಚಿನಡ್ಕದ ಮನ್ಸೂರ್ ಎಂಬಾತನ ಜಾಮೀನು ವಜಾಗೊಳಿಸಿ ಬಂಧಿಸಬೇಕು. ಈ ಸಂಬಂಧ ಇಂದು ಕಾರ್ಕಳ ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸ ಲಾಗಿದೆ ಎಂದು ಅಂಬೇಡ್ಕರ್ ಯುವಸೇನೆ ಕಾಪು ತಾಲೂಕು ಅಧ್ಯಕ್ಷ ಲೋಕೇಶ್ ಪಡುಬಿದ್ರೆ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಸಂಚು ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿರುವ ಆರೋಪಿ ಮನ್ಸೂರ್, ಪ್ರಕರಣದ ಸಾಕ್ಷಿದಾರ ರನ್ನು ಬೆದರಿಸಿ, ಜ.31ರಂದು ರಾತ್ರಿ 8ಗಂಟೆಗೆ ಅವರ ವಿರುದ್ಧ ಸುಳ್ಳು ಆರೋಪ ಗಳನ್ನು ಹೊರಿಸಿ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ ಎಂದು ಅವರು ದೂರಿದರು.
ಕೊಲೆಗೆ ಸಂಚು ಪ್ರಕರಣದ ಸಾಕ್ಷಿದಾರರಾದ ಹಸನ್ ಬಾವ, ಪಿರೋಜ್, ನಝೀರ್, ರೆಹಮಾನ್ ಇಲಿಯಾಸ್ ಸುಳ್ಳು ಪ್ರಕರಣದಿಂದ ಭಯಭೀತ ರಾಗಿದ್ದಾರೆ. ಕೊಲೆ ಸಂಚು ಪ್ರಕರಣದ ತನಿಖೆ ಇನ್ನೂ ಬಾಕಿ ಇರುವುದರಿಂದ ಆರೋಪಿ ಮನ್ಸೂರ್, ಸಾಕ್ಷಿದಾರರಿಗೆ ತೊಂದರೆ ನೀಡುವ ಹಾಗೂ ಸಾಕ್ಷನಾಶ ಮಾಡುವ ಸಾಧ್ಯತೆ ಇದೆ. ಅಲ್ಲದೆ ಆರೋಪಿ ನ್ಯಾಯಾಲಯದ ಜಾಮೀನು ಶರ್ತಗಳನ್ನು ಉಲ್ಲಂಘಿಸಿರುವುದರಿಂದ ಆತನ ಜಾಮೀನು ವಜಾಗೊಳಿ ಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಲೋಕೇಶ್ ಪಡುಬಿದ್ರೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಂಬೇಡ್ಕರ್ ಯುವಸೇನೆ ಕಾಪು ತಾಲೂಕು ಕಾರ್ಯ ದರ್ಶಿ ವಸಂತ ಪಾದಬೆಟ್ಟು, ದಸಂಸ ಮುಖಂಡ ಸದಾಶಿವ ಕಂಚಿನಡ್ಕ ಉಪಸ್ಥಿತರಿದ್ದರು.