ಮಾಲೆಗಾಂವ್ ಸ್ಫೋಟ ಪ್ರಕರಣದ ಇನ್ನೋರ್ವ ಸಾಕ್ಷಿಯಿಂದ ಪ್ರತಿಕೂಲ ಹೇಳಿಕೆ

ಮುಂಬೈ,ಫೆ.3: ಮಾಲೆಗಾಂವದಲ್ಲಿ 14 ವರ್ಷಗಳ ಹಿಂದೆ ಸಂಭವಿಸಿದ್ದ ಸ್ಫೋಟ ಪ್ರಕರಣದಲ್ಲಿ ಇನ್ನೋರ್ವ ಸಾಕ್ಷಿಯು ತಿರುಗಿಬಿದ್ದಿದ್ದು,ತನಿಖೆ ಸಂದರ್ಭದಲ್ಲಿ ಆರೆಸ್ಸಸ್ ನಾಯಕರನ್ನು ಹೆಸರಿಸುವಂತೆ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ಘಟಕ (ಎಟಿಎಸ್)ದ ಅಧಿಕಾರಿಗಳು ತನಗೆ ಹಿಂಸೆ ನೀಡಿದ್ದರು ಮತ್ತು ಬಲವಂತಗೊಳಿಸಿದ್ದರು ಎಂದು ಗುರುವಾರ ಇಲ್ಲಿಯ ವಿಚಾರಣಾ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.
ತಾನು ಸ್ವಯಂ ಇಚ್ಛೆಯಿಂದ ಎಟಿಎಸ್‌ಗೆ ಹೇಳಿಕೆ ನೀಡಿದ್ದನ್ನು ಸಾಕ್ಷಿಯು ನಿರಾಕರಿಸಿದ ಹಿನ್ನೆಲೆಯಲ್ಲಿ ಎನ್‌ಐಎ ಪ್ರಕರಣಗಳಿಗಾಗಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಿ.ಆರ್.ಸಿತ್ರೆ ಅವರು ಆತನನ್ನು ಪ್ರತಿಕೂಲ ಸಾಕ್ಷಿಯನ್ನಾಗಿ ಘೋಷಿಸಿದರು.
ಪ್ರಕರಣದಲ್ಲಿ ಈವರೆಗೆ ವಿಚಾರಣೆ ಎದುರಿಸಿದ 222 ಸಾಕ್ಷಿಗಳ ಪೈಕಿ 17 ಜನರು ಪ್ರತಿಕೂಲ ಹೇಳಿಕೆಗಳನ್ನು ನೀಡಿದ್ದಾರೆ.
ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿದ್ದ ಎಟಿಎಸ್ ತನ್ನನ್ನು ಹಲವಾರು ಸಲ ವಶಕ್ಕೆ ತೆಗೆದುಕೊಂಡಿತ್ತು ಮತ್ತು ಹಿಂಸೆಯನ್ನು ನೀಡಿತ್ತು. ಆರೆಸ್ಸೆಸ್ ಮತ್ತು ಅದರ ನಾಯಕರನ್ನು ಪ್ರಕರಣದಲ್ಲಿ ಹೆಸರಿಸುವಂತೆ ತನ್ನನ್ನು ಬಲವಂತಗೊಳಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದ ಸಾಕ್ಷಿಯು,ತಾನು ಆರೆಸ್ಸೆಸ್ ಸದಸ್ಯನಾಗಿರಲಿಲ್ಲ ಮತ್ತು ಯಾವುದೇ ಆರೆಸ್ಸೆಸ್ ಪದಾಧಿಕಾರಿಯ ಹೆಸರು ತನಗೆ ಗೊತ್ತಿರಲಿಲ್ಲ ಎಂದು ವರದಿಯಾಗಿದೆ..
ಆದಿತ್ಯನಾಥ್ (ಉ.ಪ್ರ.ಮುಖ್ಯಮಂತ್ರಿ) ಮತ್ತು ನಾಲ್ವರು ಆರೆಸ್ಸೆಸ್ ನಾಯಕರನ್ನು ಹೆಸರಿಸುವಂತೆ ಎಟಿಎಸ್ ತನ್ನನ್ನು ಬಲವಂತಗೊಳಿಸಿತ್ತು ಎಂದು ಈ ಹಿಂದೆ ಇನ್ನೋರ್ವ ಪ್ರಾಸಿಕ್ಯೂಷನ್ ಸಾಕ್ಷಿ ನ್ಯಾಯಾಲಯಕ್ಕೆ ತಿಳಿಸಿದ್ದ.
2008,ಸೆ.29ರಂದು ಮಹರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ ಪಟ್ಟಣದಲ್ಲಿಯ ಮಸೀದಿಯೊಂದರ ಬಳಿ ನಿಲ್ಲಿಸಿದ್ದ ಬೈಕ್‌ಗೆ ಅಳವಡಿಸಿದ್ದ ಬಾಂಬ್ ಸ್ಫೋಟಗೊಂಡು ಆರು ಜನರು ಮೃತಪಟ್ಟಿದ್ದರು ಮತ್ತು 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್,ಲೆ.ಕ.ಪ್ರಸಾದ ಪುರೋಹಿತ,ಸುಧಾಕರ ದ್ವಿವೇದಿ,ಮೇ(ನಿವೃತ್ತ).ರಮೇಶ ಉಪಾಧ್ಯಾಯ,ಅಜಯ ರಾಹಿರಕರ್,ಸುಧಾಕರ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ ಪ್ರಕರಣದಲ್ಲಿಯ ಆರೋಪಿಗಳಲ್ಲಿ ಸೇರಿದ್ದು,ಎಲ್ಲರೂ ಜಾಮೀನಿನಲ್ಲಿ ಹೊರಗಿದ್ದಾರೆ.







