ಕಥುವಾ ಅತ್ಯಾಚಾರ-ಹತ್ಯೆ ಪ್ರಕರಣ: ಜೀವಾವಧಿ ಶಿಕ್ಷೆಯ ಅಮಾನತು ಕೋರಿ ಹೈಕೋರ್ಟ್‌ಗೆ ಮುಖ್ಯ ಆರೋಪಿ ಮೊರೆ

ಚಂಡಿಗಡ,ಫೆ.3: ಜಮ್ಮುವಿನ ಕಥುವಾದಲ್ಲಿ ಅಲೆಮಾರಿ ಸಮುದಾಯದ ಎಂಟರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮುಖ್ಯ ಆರೋಪಿ ಸಾಂಜಿ ರಾಮ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪಂಜಾಬ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಫೆ.24ರಂದು ನಡೆಸಲಿದೆ.
ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ಕಲಾಪದಲ್ಲಿ ಜಮ್ಮು-ಕಾಶ್ಮೀರ ಸರಕಾರದ ವಕೀಲ ಆರ್.ಎಸ್.ಚೀಮಾ ಅವರು ಹೊಸ ದಿನಾಂಕಕ್ಕಾಗಿ ಕೋರಿಕೊಂಡಿದ್ದು,ನ್ಯಾಯಮೂರ್ತಿಗಳಾದ ತೇಜಿಂದರ ಸಿಂಗ್ ಧಿಂಡ್ಸಾ ಮತ್ತು ಲಲಿತ್ ಬಾತ್ರಾ ಅವರ ಪೀಠವು ಅದನ್ನು ಪುರಸ್ಕರಿಸಿತು.
ಸಿಪಿಸಿಯ ಕಲಂ 389ರಡಿ ರಾಮ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಈ ಕಲಮ್‌ನಡಿ ಆರೋಪಿಯು ತನ್ನ ಮೇಲ್ಮನವಿಯು ವಿಚಾರಣೆಗೆ ಬಾಕಿಯಿದ್ದಾಗ ತನ್ನ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ನ್ಯಾಯಾಲಯವನ್ನು ಕೋರಬಹುದು.
ಕಥುವಾ ಪ್ರಕರಣವನ್ನು ‘ಅತ್ಯಂತ ಪೈಶಾಚಿಕ ಮತ್ತು ರಾಕ್ಷಸೀ ಅಪರಾಧ ’ ಎಂದು ಬಣ್ಣಿಸಿದ್ದ ಪಠಾಣಕೋಟ್‌ನ ಸೆಷನ್ಸ್ ನ್ಯಾಯಾಲಯವು ರಾಮ್‌ಗೆ ಕೊನೆಯುಸಿರಿನವರೆಗೆ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಿತ್ತು.
ಪ್ರಕರಣದ ತನಿಖೆಯಲ್ಲಿ ಮತ್ತು ವಿಚಾರಣಾ ನ್ಯಾಯಾಲಯವು ದಾಖಲಿಸಿಕೊಂಡಿರುವ ಹೇಳಿಕೆಗಳಲ್ಲಿ ಹಲವಾರು ಲೋಪಗಳಿವೆ ಎಂದು ರಾಮ್ ತನ್ನ ಅರ್ಜಿಯಲ್ಲಿ ಹೇಳಿದ್ದಾನೆ.
ಜನವರಿ,2028ರಲ್ಲಿ ಅಪರಾಧವು ನಡೆದಿದ್ದ ದೇವಸ್ಥಾನದ ಉಸ್ತುವಾರಿಯಾಗಿದ್ದ ರಾಮ್,ವಿಶೇಷ ಪೊಲೀಸ್ ಅಧಿಕಾರಿ ದೀಪಕ ಖಜುರಿಯಾ ಮತ್ತು ಪರ್ವೇಶ ಕುಮಾರ್ ಮೂವರು ಮುಖ್ಯ ಆರೋಪಿಗಳಾಗಿದ್ದು,ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.







