ಅಲಯನ್ಸ್ ವಿವಿ ಹಣ ದುರುಪಯೋಗ: ಮಧುಕರ್ ಗೆ ಜಾಮೀನು ನಿರಾಕರಿಸಿದ ಈಡಿ ಕೋರ್ಟ್

ಬೆಂಗಳೂರು, ಫೆ.3: ಶುಲ್ಕದ ಹೆಸರಿನಲ್ಲಿ ಸಂಗ್ರಹಿಸಿದ 107 ಕೋಟಿ ರೂ.ಹಣವನ್ನು ವಂಚಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಆನೇಕಲ್‍ನ ಅಲಯನ್ಸ್ ವಿವಿಯ ಮಾಜಿ ಕುಲಪತಿ ಮಧುಕರ್ ಜಿ. ಅಂಗುರ್ ಜಾಮೀನು ಅರ್ಜಿಯನ್ನು ಈಡಿ(ಜಾರಿ ನಿರ್ದೇಶನಾಲಯ) ವಿಶೇಷ ಕೋರ್ಟ್ ವಜಾಗೊಳಿಸಿದೆ.
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಈಡಿ ಪರವಾಗಿ ವಿಶೇಷ ಅಭಿಯೋಜಕರು ಮಂಡಿಸಿದ ವಾದವನ್ನು ಪರಿಗಣಿಸಿ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿತು.
ವಿದ್ಯಾರ್ಥಿಗಳ ಪೋಷಕರಿಗೆ ಇ-ಮೇಲ್ ಹಾಗೂ ನೋಟಿಸ್ ಪತ್ರದ ಮೂಲಕ ಮಾಹಿತಿ ನೀಡಿದ್ದ ಮಧುಕರ್ ಅಂಗೂರ್ ಮತ್ತು ಇತರರು, ಕಾಲೇಜು ಶುಲ್ಕವನ್ನು ಅಲಯನ್ಸ್ ವಿಶ್ವವಿದ್ಯಾಲಯದ ಅಧಿಕೃತ ಖಾತೆಗಳಿಗೆ ರವಾನಿಸುವುದು ಬೇಡ. ಅದರ ಬದಲಾಗಿ ಅಂಗೂರ್ ಹಾಗೂ ಇತರರು ಶ್ರೀವಾರಿ ಶೈಕ್ಷಣಿಕ ಸೇವೆಗಳು ಹೆಸರಿನಲ್ಲಿ ಅಕ್ರಮವಾಗಿ ತೆರೆದಿರುವ ಬ್ಯಾಂಕ್ ಖಾತೆಗಳಿಗೆ ತಮ್ಮ ಮಕ್ಕಳ ಶುಲ್ಕವನ್ನು ಕಳುಹಿಸುವಂತೆ ಸೂಚಿಸಿದ್ದರು ಎಂದು ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಮಾಜಿ ಕುಲಪತಿ ಅಂಗೂರ್ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಈಡಿ ಅಕ್ರಮ ಹಣ ವರ್ಗಾವಣೆಗಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಬೆಂಗಳೂರು ಪೊಲೀಸರು ಮತ್ತು ಇತರೆ ಸಂಸ್ಥೆಗಳು ಅವರ ವಿರುದ್ಧ ಕನಿಷ್ಠ 4 ಎಫ್‍ಐಆರ್‍ಗಳನ್ನು ದಾಖಲಿಸಿದ್ದರು. ಅವುಗಳ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಕ್ರಮ ಕೈಗೊಂಡಿತ್ತು.





