ಪ್ರಾಧಿಕಾರ ಕೇಳಿದ ಮಾಹಿತಿ ಮತ್ತು ವರದಿ ನೀಡಲು ಕ್ರಮ ವಹಿಸಿ: ಟಿ.ಎಸ್.ನಾಗಾಭರಣ

ಬೆಂಗಳೂರು, ಫೆ. 3: `ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇಳಿದ ಮಾಹಿತಿಗಳು ಮತ್ತು ಅನುಪಾಲನ ವರದಿಯನ್ನು ಪ್ರಾಧಿಕಾರಕ್ಕೆ ಶೀಘ್ರವಾಗಿ ಕಳುಹಿಸುವುದರ ಬಗ್ಗೆ ಸೂಕ್ತ ಕ್ರಮ ವಹಿಸಬೇಕು' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಇಂದಿಲ್ಲಿ ಸೂಚನೆ ನೀಡಿದ್ದಾರೆ.
ಗುರುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪೌರಾಡಳಿತ ನಿರ್ದೇಶನಾಲಯಕ್ಕೆ ಭೇಟಿ ನೀಡಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಎಲ್ಲೆಡೆಯೂ ಸರಿಯಾದ ಕನ್ನಡ ಕಾಣುವುದರೊಂದಿಗೆ ಸರಿಯಾದ ಕನ್ನಡ ಬಳಕೆಯಾಗಲಿ ಎಂಬ ಉದ್ದೇಶದಿಂದ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತದೆ ಎಂದರು.
ಜ.21ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕಳುಹಿಸಲಾದ ನಡವಳಿ ಇಲ್ಲಿಯವರೆಗೂ ಪೌರಾಡಳಿತ ನಿರ್ದೇಶನಾಲಯದಿಂದ ಅನುಪಾಲನ ವರದಿ ಕಳುಹಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಟಿ.ಎಸ್.ನಾಗಾಭರಣ, `ತಮಿಳುನಾಡಿಗೆ ಹೊಂದಿಕೊಂಡ ಬೆಂಗಳೂರಿನ ಗಡಿಭಾಗದಲ್ಲಿರುವ ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ಕನ್ನಡ ಕಣ್ಮರೆಯಾಗಿದೆ. ಈ ಬಗ್ಗೆ ಪೌರಾಡಳಿತ ನಿರ್ದೇಶನಾಲಯ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ' ಎಂದು ಬೇಸರ ವ್ಯಕ್ತಪಡಿಸಿದರು.
`ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸಬೇಕೆಂದು ನಿಯಮವಿದ್ದರೂ ಅದನ್ನು ಪೌರಾಡಳಿತ ನಿರ್ದೇಶನಾಲಯ ಅಂಗಡಿಗಳ ಪರವಾನಗಿ ನವೀಕರಣದ ಸಂದರ್ಭದಲ್ಲಿ ಷರತ್ತನ್ನು ವಿಧಿಸದಿರುವುದು ಸರಿಯಾದ ನಡವಳಿ ಅಲ್ಲ ಎಂದು ತಿಳಿಸಿದ ಟಿ.ಎಸ್.ನಾಗಾಭರಣ, ವಾರದೊಳಗೆ ಕನ್ನಡದಲ್ಲಿ ನಾಮಫಲಕವನ್ನು ಅಳವಡಿಸುವ ಷರತ್ತನ್ನು ವಿಧಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೆ ತಕ್ಷಣವೇ ಸ್ಪಂದಿಸಿದ ಪೌರಾಡಳಿತ ನಿರ್ದೇಶನಾಲಯದ ಉನ್ನತ ಅಧಿಕಾರಿಗಳು ತಾಂತ್ರಿಕ, ಅಭಿವೃದ್ದಿ, ಘನತ್ಯಾಜ್ಯ ವಸ್ತು ನಿರ್ವಹಣೆ, ಕೆಎಂಡಿಎಸ್ ಹಾಗೂ ಆಡಳಿತ ವಿಭಾಗದ ಅಧಿಕಾರಿಗಳನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಿದರು. ಈ ಸಮಿತಿಯೊಂದಿಗೆ ಚರ್ಚಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಅಂಗಡಿ ಮುಂಗಟ್ಟುಗಳ ಪರವಾನಗಿ ನವೀಕರಣದ ಸಂದರ್ಭದಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕವಿರುವ ಷರತ್ತನ್ನು ವಿಧಿಸಬೇಕು. ಇದನ್ನು ಜಾರಿಗೊಳಿಸಿರುವ ಬಗ್ಗೆ ಪ್ರಾಧಿಕಾರಕ್ಕೆ 3-4 ದಿನಗಳಲ್ಲಿ ಮಾಹಿತಿ ನೀಡಬೇಕು ಎಂದರು.
ಕನ್ನಡ ಪರ ಚಿಂತಕ ರಾ.ನಂ.ಚಂದ್ರಶೇಖರ ಮಾತನಾಡಿ, `ನಾಮಫಲಕಗಳಲ್ಲಿ ಕನ್ನಡದ ಕಡೆಗಣನೆ ಒಂದೆಡೆಯಾದರೆ ಸರಿಗನ್ನಡ ಬಳಸದಿರವುದು ಇನ್ನೊಂದು ದುರಂತ. ಈ ಬಗ್ಗೆಯೂ ಪೌರಾಡಳಿತ ನಿರ್ದೇಶನಾಲಯ ಸರಿಯಾಗಿ ಪರಿಶೀಲಿಸಬೇಕು. 61 ನಗರಸಭೆ, 10 ಮಹಾನಗರ ಪಾಲಿಕೆ, 123 ಪುರಸಭೆ ಹಾಗೂ 118 ಪಟ್ಟಣ ಪಂಚಾಯಿತಿಗಳು ಪೌರಾಡಳಿತ ನಿರ್ದೇಶನಾಲಯದ ವ್ಯಾಪ್ತಿಗೆ ಒಳಪಡುತ್ತವೆ. ಇವುಗಳ ವ್ಯಾಪ್ತಿಯಲ್ಲಿ ಸರಿಗನ್ನಡ ಬಳಕೆಯಾದರೆ ರಾಜ್ಯದಲ್ಲಿ ಕನ್ನಡ ಅನುಷ್ಠಾನವಾಗುವುದರ ಜೊತೆಗೆ ಎಲ್ಲೆಡೆಯೂ ಕನ್ನಡ ರಾರಾಜಿಸಲಿದೆ ಎಂದು ತಿಳಿಸಿದರು.
ಸಿಎಂ ಸಲಹೆಗಾರರಾದ (ಇ-ಆಡಳಿತ) ಬೇಳೂರು ಸುದರ್ಶನ ಮಾತನಾಡಿ, ಸರಕಾರದ ಅಧಿಕೃತ ನಮೂನೆಯ ವೆಬ್‍ಸೈಟ್ ರೀತಿಯಲ್ಲಿಯೇ ಪೌರಾಡಳಿತ ನಿರ್ದೇಶನಾಲಯದ ವೆಬ್‍ಸೈಟ್ ಇರಬೇಕು. ಸರಕಾರಕ್ಕೆ ಸಂಬಂಧಿಸಿದಂತೆ ಎಲ್ಲ ಇಲಾಖೆಯ ಜಾಲತಾಣವಿರಬೇಕೆಂಬ ನಿಯಮವಿದೆ. ಈ ಮಾದರಿಯಲ್ಲಿಯೇ ನಿಮ್ಮ ನಿರ್ದೇಶನಾಲಯದ ಜಾಲತಾಣವೂ ಇರಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕರು (ಆಡಳಿತ) ಶೋಭಾ ಬಿ., ಮುಖ್ಯ ಅಭಿಯಂತರರಾದ ಸಿ.ಸತ್ಯನಾರಾಯಣ, ಕೆ.ಎಂ.ಎ.ಎಸ್ ಜಂಟಿ ನಿರ್ದೇಶಕ (ಅಭಿವೃದ್ಧಿ) ಬಿ.ಕೆ.ರುದ್ರಮುನಿ, ಕೆ.ಎಂ.ಎ.ಎಸ್ ಉಪ ನಿರ್ದೇಶಕ(ಸುಧಾರಣೆ) ಗೋಪಾಲ್ ಜಾಧವ್ ಮತ್ತಿತರರು ಹಾಜರಿದ್ದರು.







