ಪಾದಚಾರಿ ಮಾರ್ಗ ಬೇಕಾಗಿದೆ!
ಮಾನ್ಯರೇ,
ಮಂಗಳೂರು ನಗರದ ಕದ್ರಿ ಸರ್ಕ್ಯೂಟ್ ಹೌಸ್ ಪಕ್ಕದ ರಸ್ತೆಯಲ್ಲಿ ಒಂದು ಬದಿಯಲ್ಲಿ ಮಾತ್ರ ಪಾದಚಾರಿ ರಸ್ತೆ ಇದೆ. ಇನ್ನೊಂದು ಬದಿಯಲ್ಲಿ ಇಲ್ಲ. ಅಲ್ಲದೆ ಯಾವುದೇ ರೀತಿಯ ತಡೆ ಗೋಡೆಯೂ ಇಲ್ಲ. ರಸ್ತೆ ಬದಿಯಲ್ಲಿ ಆಳವಾದ ಗುಂಡಿ ಇದ್ದು, ವಾಹನಗಳು ವೇಗವಾಗಿ ಬಂದರೆ ಜನರಿಗೆ ಸರಿದು ನಿಲ್ಲಲು ಜಾಗವಿಲ್ಲ. ಇದರಿಂದ ಅಪಘಾತಗಳು ಆಗಬಹುದು. ಹೀಗಾಗಿ ಪಾದಚಾರಿಗಳಿಗೆ ನಡೆದಾಡಲು ತುಂಬಾ ಕಿರಿಕಿರಿಯಾಗುತ್ತಿದೆ. ಒಂದು ಬದಿಯಲ್ಲಿ ಪಾದಚಾರಿ ರಸ್ತೆಯಿದ್ದರೂ ಇಲ್ಲಿ ಜನರಿಗೆ ಅಪಾಯ ತಪ್ಪಿದ್ದಲ್ಲ. ಜನರು ಭಯದಿಂದ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸ್ಥಳೀಯಾಡಳಿತ ದುರಂತ ಸಂಭವಿಸುವ ಮೊದಲು ಎಚ್ಚೆತ್ತುಕೊಂಡು ಪಾದಚಾರಿಗಳ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದೆ.
ಪಾದಚಾರಿಗಳ ಮಾರ್ಗದ ಸಮಸ್ಯೆ ಇಂದು, ನಿನ್ನೆಯದಲ್ಲ. ಮಂಗಳೂರು ನಗರ ಸ್ಮಾರ್ಟ್ ಸಿಟಿ ಆಗುವುದಕ್ಕಿಂತ ಮುನ್ನವೂ ಇದೇ ಸಮಸ್ಯೆ ಸಾಕಷ್ಟು ಕಾಡಿತ್ತು. ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾಗಿ ಆಮೆಗತಿಯಲ್ಲಿ ನಡೆಯುತ್ತಿದ್ದರೂ ಪಾದಚಾರಿ ಮಾರ್ಗ ಸಮಸ್ಯೆ ಇಂದಿಗೂ ಇದೆ. ಇನ್ನಾದರೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಪಾದಚಾರಿ ಮಾರ್ಗದ ಸಮಸ್ಯೆ ಬಗೆಹರಿಸಬೇಕಾಗಿದೆ.





