ವಾಯವ್ಯ ಸಿರಿಯದಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಐಸಿಸ್ ನಾಯಕ ಅಲ್ ಖುರೈಷಿ ಹತ್ಯೆ: ಅಮೆರಿಕ
ಅಮೆರಿಕ ಪಡೆಗಳ ಕಾರ್ಯಾಚರಣೆಯಲ್ಲಿ ಇಬ್ಬರು ಮಕ್ಕಳು ಸಹಿತ 13 ಮಂದಿ ಮೃತ್ಯು

ಬೈರೂತ್,ಫೆ.2: ವಾಯವ್ಯ ಸಿರಿಯದಲ್ಲಿ ಶಂಕಿತ ಉಗ್ರ ನೆಲೆಗಳ ಮೇಲೆ ತನ್ನ ಪಡೆಗಳು ಗುರುವಾರ ನಡೆಸಿದ ದಾಳಿಯಲ್ಲಿ ಐಸಿಸ್ ನಾಯಕ ಇಬ್ರಾಹೀಂ ಅಲ್ ಹಾಶಿಮಿ ಅಲ್-ಖುರೈಷಿಯನ್ನು ಹತ್ಯೆಗೈದಿರುವುದಾಗಿ ಅಮೆರಿಕ ಹೇಳಿಕೊಂಡಿದೆ.
ಅಮೆರಿಕ ಪಡೆಗಳ ಈ ಕಾರ್ಯಾಚರಣೆಯಲ್ಲಿ ಇಬ್ಬರು ಮಕ್ಕಳು ಹಾಗೂ ಓರ್ವ ಮಹಿಳೆ ಸೇರಿದಂತೆ 13ಮಂದಿ ಸಾವನ್ನಪ್ಪಿದ್ದಾರೆ ಎಂದು ಸಿರಿಯದಲ್ಲಿನ ಮಾನವಹಕ್ಕುಗಳ ವೀಕ್ಷಣಾಲಯದ ವರಿಷ್ಠ ರಾಮಿ ಆಬ್ದೆಲ್ ರಹ್ಮಾನ್ ತಿಳಿಸಿದ್ದಾರೆ. ಟರ್ಕಿ ಗಡಿಯಲ್ಲಿರುವ ವಾಯವ್ಯ ಸಿರಿಯದ ಜನದಟ್ಟಣೆಯ ಪಟ್ಟಣವಾದ ಆತ್ಮೆಹ್‌ನಲ್ಲಿರುವ ಕಟ್ಟಡವನ್ನು ಗುರಿಯಿರಿಸಿ ಈ ದಾಳಿಯನ್ನು ನಡೆಸಲಾಗಿದೆ.
ಐಸಿಸ್ ನಾಯಕ ಅಬು ಇಬ್ರಾಹೀಂ ಅಲ್ ಹಾಶಿಮಿ ಅಲ್-ಖುರೈಷಿಯನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಲಾಗಿತ್ತೆುಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.
‘‘ನನ್ನ ಸೂಚನೆಯಂತೆ ಅಮೆರಿಕ ಪಡೆಗಳು ಬುಧವಾರ ರಾತ್ರಿ ಯಶಸ್ವಿಯಾಗಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಸಿವೆ. ನಮ್ಮ ಸಶಸ್ತ್ರ ಪಡೆಗಳ ಕುಶಲತೆ ಹಾಗೂ ಶೌರ್ಯಕ್ಕೆ ಧನ್ಯವಾದಗಳು, ಐಸಿಸ್ ನಾಯಕ ಅಬು ಇಬ್ರಾಹೀಂ ಅಲ್ ಹಾಶೀಮಿ ಅಲ್ ಖುರೈಷಿಯನ್ನು ಯುದ್ಧಭೂಮಿಯಿಂದ ತೆಗೆದುಹಾಕಿದ್ದೇವೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಅಮೆರಿಕನ್ನರು ಸುರಕ್ಷಿತವಾಗಿ ವಾಪಾಸಾಗಿದ್ದಾರೆ’’ ಎಂದು ಬೈಡೆನ್ ಗುರುವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಅಮೆರಿಕ ನೇತೃತ್ವದ ಮೈತ್ರಿಪಡೆಗಳು ದಾಳಿಗೆ ಮುನ್ನ ಎರಡು ತಾಸುಗಳ ಕಾಲ ಶಂಕಿತ ಉಗ್ರರ ನೆಲೆಯೆಂದು ಭಾವಿಸಲಾದ ಕಟ್ಟಡದ ಮೇಲೆ ಗಿರಕಿ ಹೊಡೆಯುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಆನಂತರ ಅಮೆರಿಕ ಸೈನಿಕರು ಕಾರ್ಯಾಚರಣೆ ನಡೆಸಿ, ಕಟ್ಟಡದೊಳಗೆ ನುಗ್ಗಿದರೆಂದು ಅವರು ಹೇಳಿದ್ದಾರೆ.
ಅಮೆರಿಕ ಪಡೆಗಳು ತಾವು ಗುರಿಯಿರಿಸಿದ್ದ ಕಟ್ಟಡವನ್ನು ಸುತ್ತುವರಿದ ಬಳಿಕ, ಆಸುಪಾಸಿನಲ್ಲಿದ್ದವರು ಜಾಗ ಖಾಲಿ ಮಾಡುವಂತೆ ಧ್ವನಿವರ್ಧಕಗಳಲ್ಲಿ ಸೂಚನೆ ನೀಡಿದರೆಂದು ಸ್ಥಳೀಯ ನಿವಾಸಿ ಮುಹಮ್ಮದ್ ಚೆಹಾದಿ ಎಂಬಾತ ತಿಳಿಸಿದಾದರೆ.
ಕಾರ್ಯಾಚರಣೆಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆಂದು ಸಿರಿಯದ ಬಂಡುಕೋರ ಪ್ರಾಬಲ್ಯದ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ‘ವೈಟ್ ಹೆಲ್ಮೆಟ್ಸ್’ ಸ್ವಯಂಸೇವಾ ರಕ್ಷಣಾ ಸಂಘಟನೆಯ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಕಾರ್ಯಾಚರಣೆಯ ಶಂಕಿತ ಉಗ್ರರು ಹಾಗೂ ಅಮೆರಿಕ ಪಡೆಗಳ ನಡುವ ಘರ್ಷಣೆಳು ನಡೆದಿರುವುದಾಗಿ ಸ್ಥಳೀಯ ಕಾರ್ಯಕರ್ತರು ಹಾಗೂ ನಿವಾಸಿಗಳು ತಿಳಿಸಿದ್ದಾರೆ. ಈದಾಳಿಗೆ ಸಂಬಂಧಿಸಿ ಅಮೆರಿಕದ ರಕ್ಷಣಾ ಕಾರ್ಯಾಲಯ ಯಾವುದೇ ವಿವರಗಳನ್ನು ನೀಡಿಲ್ಲ. ಆದರೆ ಈ ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗಿದೆಯೆಂದು ಅವರು ತಿಳಿಸಿದ್ದಾರೆ.
2019ರಲ್ಲಿ ಅಬು ಬಕರ್ ಅಲ್ ಬಗ್ದಾದಿಯ ಹತ್ಯೆಯ ಬಳಿಕ ಅಮೆರಿಕ ಪಡೆಗಳು ಈ ಪ್ರಾಂತದಲ್ಲಿ ನಡೆಸಿದ ಅತಿ ದೊಡ್ಡ ಸೇನಾ ಕಾರ್ಯಾಚರಣೆ ಇದಾಗಿದೆ.







