ಕುಂದಾಪುರ: ಮೂರನೇ ದಿನವೂ ಮುಂದುವರಿದ ಹಿಜಾಬ್-ಕೇಸರಿ ಶಾಲು ವಿವಾದ

ಕುಂದಾಪುರ, ಫೆ.4: ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದೆರಡು ದಿನಗಳಿಂದ ಕಂಡುಬಂದ ಹಿಜಾಬ್-ಕೇಸರಿ ಶಾಲಿನ ವಿವಾದ ಸತತ ಮೂರನೇ ದಿನವಾದ ಶುಕ್ರವಾರವೂ ಮುಂದುವರಿದಿದೆ.
ಕಾಲೇಜಿನ 20ಕ್ಕೂ ಅಧಿಕ ವಿದ್ಯಾರ್ಥಿನಿಯರು ಇಂದು ಸಹ ಹಿಜಾಬ್ ಧರಿಸಿ ಬಂದಿದ್ದು, ಕಾಲೇಜು ಆವರಣದೊಳಗೆ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ ಘಟನೆ ನಡೆದಿದೆ.
ಗೇಟ್ ಒಳಕ್ಕೆ ಪ್ರವೇಶಿಸಿದ ಈ ವಿದ್ಯಾರ್ಥಿನಿಯರಿಗೆ ಕಾಲೇಜು ಆವರಣ ದೊಳಕ್ಕೆ ಪ್ರವೇಶಿಸುವಂತಿಲ್ಲ ಎಂದು ಪ್ರಾಂಶುಪಾಲರು ಸೂಚಿಸಿದರೂ, ನಾವು ಬೀದಿಯಲ್ಲಿ ನಿಲ್ಲುವುದಿಲ್ಲ. ನಮಗೆ ನ್ಯಾಯ ಬೇಕು. ಆವರಣದೊಳಕ್ಕಾದರೂ ನಮಗೆ ಪ್ರವೇಶಕ್ಕೆ ಅನುಮತಿ ನೀಡಿ ಎಂದ ವಿದ್ಯಾರ್ಥಿಗಳು ಗೇಟ್ ತಳ್ಳಿಕೊಂಡು ಕಾಲೇಜು ಆವರಣದೊಳಕ್ಕೆ ಪ್ರವೇಶಿಸಿದರು.
ಪೋಷಕರ ಆಕ್ರೋಶ: ಅದಾಗಲೇ ಕಾಲೇಜು ಬಳಿ ಆಗಮಿಸಿದ ವಿದ್ಯಾರ್ಥಿನಿಯರ ಪೋಷಕರು, ಸ್ಕಾರ್ಫ್ ಧರಿಸಿ ತರಗತಿಗೆ ತೆರಳಲು ಅನುಮತಿ ನೀಡದ ಕಾಲೇಜು ಆಡಳಿತ ಮಂಡಳಿ ಕ್ರಮವನ್ನು ಆಕ್ಷೇಪಿಸಿ, ಗೇಟ್ ಹೊರಭಾಗದಲ್ಲಿ ನಿಂತು ಪ್ರತಿಭಟಿಸಿದರು. ಮಾತ್ರವಲ್ಲ ಗುರುವಾರ ಇಡೀ ದಿನ ವಿದ್ಯಾರ್ಥಿನಿಯರನ್ನು ರಸ್ತೆ ಬದಿಯಲ್ಲಿ ಕೂರುವಂತೆ ಮಾಡಿದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕಾಲೇಜು ಬಳಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಕುಂದಾಪುರ ಡಿವೈಎಸ್ಪಿ ಅವರು ಪೋಷಕರಿಗೆ ತಿಳಿಸಿದಾಗ, ಅವರೊಳಗೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು.
ಕೇಸರಿ ಶಾಲು ಧರಿಸಿ ಘೋಷಣೆ: ಅತ್ತ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಕಾಲೇಜು ಆವರಣ ಪ್ರವೇಶಿಸುತ್ತಿದ್ದಂತೆ, ಒಂದಷ್ಟು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತಗರತಿಗಳಲ್ಲಿ ಓಡಾಡಲು ಆರಂಭಿಸಿದರು. ಅವರನ್ನೂ ಹೊರಕ್ಕೆ ಕಳುಹಿಸುವಂತೆ ವಿದ್ಯಾರ್ಥಿನಿಯರ ಪೋಷಕರು ಆಕ್ಷೇಪಿಸಿದರು. ನಮ್ಮ ವಿದ್ಯಾರ್ಥಿಗಳಿಗೊಂದು ನ್ಯಾಯ, ಅವರಿಗೊಂದು ನ್ಯಾಯವೇಕೆ ಎಂದು ಗೇಟ್ ಹೊರಭಾಗ ನಿಂತ ಪೋಷಕರು ಆಕ್ರೋಷ ವ್ಯಕ್ತಪಡಿಸಿದರು. ಬಳಿಕ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನವರು ಹೊರಕಳುಹಿಸಿದರು.
ಬಿಗುವಿನ ವಾತಾವರಣ: ಬ್ಯಾಗಿನಲ್ಲಿ ಕೇಸರಿ ಶಾಲು ತಂದಿದ್ದ ನೂರಾರು ವಿದ್ಯಾರ್ಥಿಗಳು ಶಾಲು ಧರಿಸಿ ಜೈಶ್ರೀರಾಮ ಘೋಷಣೆ ಕೂಗುತ್ತಾ ಹೊರಬರುತ್ತಿದ್ದಂತೆ ಗೇಟಿನ ಬಳಿ ಬಿಗುವಿನ ವಾತಾವರಣ ನಿರ್ಮಾಣ ವಾಯಿತು. ಪೊಲೀಸರ ಮುಂದೆ ತಮ್ಮ ತಮ್ಮ ಅಹವಾಲು ಹೇಳಿಕೊಂಡರಾದರೂ ಸರಕಾರದ ಆದೇಶ ಪಾಲನೆ ಅಗತ್ಯವೆಂದು ಪೊಲೀಸರು ಎಲ್ಲರನ್ನೂ ಚದುರಿಸಿದರು.
ವಿದ್ಯಾರ್ಥಿಗಳು ಕೇಸರಿ ಶಾಲು ತೆಗೆದು ಮತ್ತೆ ತರಗತಿ ಒಳಗೆ ಪ್ರವೇಶಿಸಿದರೂ, ವಿದ್ಯಾರ್ಥಿನಿಯರು ಸ್ಕಾರ್ಫ್ ತೆಗೆಯಲು ಒಪ್ಪದೇ ಮತ್ತೆ ಗೇಟಿನ ಬಳಿಯೇ ಕೂರುವಂತಾಯಿತು.
ಮನವಿಗೆ ನಕಾರ: ವಿದ್ಯಾರ್ಥಿನಿಯರು ಜನನಿಬಿಡ ರಸ್ತೆಯ ಬದಿಯಲ್ಲಿ ಕುಳಿತು ಕೊಳ್ಳುವುದು ಸರಿಯಲ್ಲ. ಕಾಲೇಜಿನೊಳಗೆ ಕೂರಲು ಕೊಠಡಿ ಯನ್ನಾದರೂ ನೀಡಿ ಎಂದು ಪೋಷಕರು ಹಾಗೂ ಸಮುದಾಯದ ಮುಖಂಡರು ಪರಿಪರಿಯಾಗಿ ವಿನಂತಿಸಿದರೂ, ಸರಕಾರದ ಆದೇಶದ ನೆಪವೊಡ್ಡಿ ಗೇಟ್ ಮುಚ್ಚಿ ವಿದ್ಯಾರ್ಥಿನಿಯರ ಪ್ರವೇಶವನ್ನು ನಿರ್ಬಂಧಿಸಲಾಯಿತು.
ರಸ್ತೆ ಬದಿಯಲ್ಲೇ ದಿನಕಳೆದ ವಿದ್ಯಾರ್ಥಿನಿಯರು: ಇದರಿಂದಾಗಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಶುಕ್ರವಾರ ದಿನವಿಡೀ ರಸ್ತೆ ಬದಿಯಲ್ಲೇ ಕುಳಿತುಕೊಳ್ಳಬೇಕಾಯಿತು. ಕುಂದಾಪುರದ ಜನನಿಬಿಡ ಪ್ರಮುಖ ರಸ್ತೆಯ ಬದಿಯಲ್ಲೇ ಇರುವ ಕಾಲೇಜಿನ ಕಾಂಪೌಂಡ್ ಹೊರಗೆ ಅವರೆಲ್ಲರೂ ಶುಕ್ರವಾರ ಬೆಳಗಿನಿಂದ ಸಂಜೆ ತನಕವೂ ಕುಳಿತಿರುವಂತಾಯಿತು. ಮಧ್ಯಾಹ್ನದ ಊಟವನ್ನೂ ಅವರು ರಸ್ತೆ ಬದಿಯಲ್ಲೇ ಕೂತು ಮಾಡುತ್ತಿರುವ ದೃಶ್ಯವೂ ಕಂಡುಬಂತು.
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಸರ್ಕಲ್ ಇನ್‌ಸ್ಪೆಕ್ಟರ್ ಗೋಪಿಕೃಷ್ಣ, ನಗರ ಠಾಣೆ ಪಿಎಸ್‌ಐ ಸದಾಶಿವ ಗವರೋಜಿ, ಕುಂದಾಪುರ ಟ್ರಾಫಿಕ್ ಠಾಣೆ ಪಿಎಸ್‌ಐ ಸುಧಾ ಪ್ರಭು, ಅಮಾಸೆಬೈಲು ಠಾಣೆ ಪಿಎಸ್‌ಐ ಸುಬ್ಬಣ್ಣ ಮೊದಲಾದವರು ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು. ಕಾಲೇಜು ಬಳಿ ಡಿಎಆರ್ ವಾಹನವನ್ನು ನಿಯೋಜಿಸಲಾಗಿತ್ತು.
''ಎರಡು ದಿನಗಳಿಂದ ಶೌಚಾಲಯ ಮೊದಲಾದೆಡೆ ತೆರಳಲು ತುಂಬಾ ಸಮಸ್ಯೆ ಅನುಭವಿಸುತಿದ್ದೇವೆ. ರಸ್ತೆಬದಿ ಕುಳಿತು ಊಟ ಮಾಡಿದ್ದೇವೆ. ನಮ್ಮ ಕಷ್ಟ ಕೇಳುವವರು ಇಲ್ಲ. ಪ್ರಾಂಶುಪಾಲರು ಕೂಡ ಸುಳ್ಳು ಮಾಹಿತಿ ನೀಡಿ ನಮ್ಮದೆ ತಪ್ಪು ಎನ್ನುವ ರೀತಿಯಲ್ಲಿ ಹೇಳುತ್ತಿದ್ದಾರೆ. ನಾವು ಮೊದಲಿನಿಂದಲೂ ಹಿಜಾಬ್ ಧರಿಸಿ ಬರುವುದಕ್ಕೆ ನಮ್ಮ ಬಳಿ ಸಾಕ್ಷ್ಯವಿದೆ. ಹಿಜಾಬ್ ನಮ್ಮ ಮಾನಮುಚ್ಚುವ ಒಂದು ಸಾಧನ. ಅದನ್ನು ಧರಿಸಿ ಬಂದರೆ ತಪ್ಪೇನು.? ನಮಗೆ ಹಿಜಾಬ್ ಕೂಡ ಬೇಕು. ಪಾಠವೂ ಬೇಕು. -ಸಂತ್ರಸ್ಥ ವಿದ್ಯಾರ್ಥಿನಿಯರು
ಶನಿವಾರ ಕಾಲೇಜಿಗೆ ರಜೆ ಘೋಷಣೆ
ಕಳೆದ ಮೂರು ದಿನಗಳಿಂದ ಹಿಜಾಬ್ ವಿವಾದ ನಡೆಯುತ್ತಿರುವ ಕುಂದಾಪುರ ಸರಕಾರಿ ಜೂನಿಯರ್ ಕಾಲೇಜಿಗೆ ನಾಳೆ ಶನಿವಾರ ರಜೆ ಘೋಷಿಸಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಬಸ್ರೂರು ರಥೋತ್ಸವದ ಹಿನ್ನೆಲೆಯಲ್ಲಿ ನಾಳೆ ರಜೆ ನೀಡಲಾಗಿದೆ. ಈ ಮಧ್ಯೆ ಶನಿವಾರ ಎಸ್‌ಡಿಎಂಸಿ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.








.jpeg)


.jpeg)







