ಹಿಜಾಬ್- ಕೇಸರಿ ಶಾಲು ವಿವಾದ; ಅಧಿಕಾರದಲ್ಲಿದ್ದೂ ಬಿಜೆಪಿಯಿಂದ ಕ್ಷುಲ್ಲಕ ರಾಜಕಾರಣ: ಕಾಂಗ್ರೆಸ್ ಆರೋಪ
ಉಡುಪಿ, ಫೆ.4: ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ ಎಂದೂ ಜಾತಿ, ಧರ್ಮಗಳ ಹೆಸರಿನಲ್ಲಿ ರಾಜಕಾರಣ ಮಾಡಿಲ್ಲ. ಆದರೆ ಹಿಜಾಜ್, ಕೇಸರಿ ಶಾಲು ವಿವಾದವನ್ನು ಹುಟ್ಟುಹಾಕುತ್ತಿರುವುದು ಬಿಜೆಪಿ ಮತ್ತದರ ’ಬಿ’ ಟೀಮ್‌ಗಳಾಗಿವೆ ಎಂದು ಕೆಪಿಸಿಸಿ ಸೋಶಿಯಲ್ ಮೀಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಚಂದ್ರಶೇಖರ ಶೆಟ್ಟಿ ಹೇಳಿದ್ದಾರೆ.
ಅತ್ತ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿ ಕಳುಹಿಸುವುದು ಕೂಡ ಅವರೇ, ಇತ್ತ ಎಲ್ಲರೂ ಶಾಲಾ ಸಮವಸ್ತ್ರ ಮಾತ್ರವೇ ಧರಿಸಿ ಎನ್ನುವವರೂ ಕೂಡ ಅವರೇ ಆಗಿದ್ದಾರೆ. ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಧಿಕಾರದಲ್ಲಿದ್ದೂ ಕೂಡ ಇಂತಹ ಕ್ಷುಲ್ಲಕ ರಾಜಕಾರಣ ಮಾಡುವ ಮತ್ತೊಂದು ಸರಕಾರ ಅಥವಾ ರಾಜಕೀಯ ಪಕ್ಷ ಈ ದೇಶದಲ್ಲಿ ಇದ್ದಿರಲಿಲ್ಲ ಎಂದರೆ ತಪ್ಪಾಗಲಾರದು ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಶಿಕ್ಷಣ ವಿರೋಧಿ ರಾಜಕಾರಣ ಮಾಡುವ ಮೂಲಕ ಬಿಜೆಪಿ ವಿದ್ಯಾರ್ಥಿಗಳ ಜೀವನ ಹಾಳು ಮಾಡುತ್ತಿದೆ. ರಾಜಕೀಯಕ್ಕೆ ಮಕ್ಕಳನ್ನು ಬಳಸಿ ಕೊಳ್ಳುತ್ತಿರುವುದು ಅಕ್ಷಮ್ಯ. ಒಂದೆಡೆ ಕೊರೋನಾ ಲಾಕ್‌ಡೌನ್‌ನಿಂದ ಹಾಗೂ ಇತರ ಕಾರಣಗಳಿಂದ ವಿದ್ಯಾಭ್ಯಾಸಕ್ಕೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಈ ಕಾರಣದಿಂದ ಮಕ್ಕಳ ಪಾಠಗಳು ಪೂರ್ಣಗೊಂಡಿಲ್ಲ. ಈ ಮಧ್ಯೆ ಇದೀಗ ವಿವಾದದ ಹೆಸರಿನಲ್ಲಿ ಇರುವ ಸಮಯವನ್ನು ಕೂಡ ಉದ್ದೇಶ ಪೂರ್ವಕವಾಗಿ ಹಾಳು ಮಾಡಲಾಗುತ್ತಿದೆ. ಇದರಿಂದ ಕಲಿಯುವ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗುತ್ತಿದೆ. ಹೆತ್ತವರು ತಮ್ಮ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ, ರಾಜಕೀಯ ಹಸ್ತಕ್ಷೇಪ ಆಗದ ರೀತಿಯಲ್ಲಿ ತಮ್ಮ ಮಕ್ಕಳಿಗೆ ಬುದ್ದಿ ಹೇಳುವುದು ಸೂಕ್ತ ಎಂದವರು ಮನವಿ ಮಾಡಿದ್ದಾರೆ.