ಹಿಜಾಬ್ ವಿವಾದ; ಕುಂದಾಪುರ: ಭಂಡಾರ್ ಕಾರ್ಸ್ ಕಾಲೇಜಿನಲ್ಲೂ ತಡೆ

ಕುಂದಾಪುರ, ಫೆ.4: ನಗರದ ಪ್ರಮುಖ ಖಾಸಗಿ ಕಾಲೇಜು ಆಗಿರುವ ಭಂಡಾರ್ಕರ್ಸ್ ಕಾಲೇಜಿನಲ್ಲಿಯೂ ಶುಕ್ರವಾರ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳ ಪ್ರವೇಶಕ್ಕೆ ತಡೆವೊಡ್ಡಲಾಯಿತು.
ವಿದ್ಯಾರ್ಥಿನಿಯರು ಈ ವೇಳೆ ಕಾಲೇಜು ಗೇಟ್ ಬಳಿ ಕುಳಿತು ಪ್ರತಿಭಟನೆಗೆ ಮುಂದಾದರು. ಅವರಿಗೆ ಮುಸ್ಲಿಂ ಸಮುದಾಯದ ಒಂದಷ್ಟು ವಿದ್ಯಾರ್ಥಿಗಳು ಬೆಂಬಲ ನೀಡಿ ಕೂತು ನ್ಯಾಯಕ್ಕಾಗಿ ಘೋಷಣೆ ಕೂಗಿದರು. ಹಿಜಾಬ್ ನಮ್ಮ ಹಕ್ಕು, ಆದರೆ ಇದಕ್ಕಾಗಿ ನಮ್ಮನ್ನು ಅಪರಾಧಿಗಳಂತೆ ಬಿಂಬಿಸಲಾಗುತ್ತಿದೆ ಎಂಬುದಾಗಿ ವಿದ್ಯಾರ್ಥಿಗಳು ಆಕ್ರೋಷ ವ್ಯಕ್ತಪಡಿಸಿದರು.
ಈ ವೇಳೆ ಪೋಷಕರು ಕೂಡ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಆಗಮಿಸಿದ ಕಾಲೇಜಿನ ಪ್ರಾಂಶುಪಾಲ ನಾರಾಯಣ ಶೆಟ್ಟಿ ವಿದ್ಯಾರ್ಥಿಗಳ ಮನವೊಲಿಸಿದರು. ಹಿಜಾಬ್ ಧರಿಸಿದರೆ ಕಾಲೇಜಿಗೆ ಪ್ರವೇಶವಿಲ್ಲ ಎಂದು ಮನವರಿಕೆ ಮಾಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ವಾಪಾಸ್ ಪಡೆದರು.
ಬಸ್ರೂರು ಶಾರದಾ ಕಾಲೇಜು: ಕುಂದಾಪುರ ಸಮೀಪದ ಬಸ್ರೂರು ಶಾರದಾ ಕಾಲೇಜಿನಲ್ಲೂ ಮೊದಲಿಗೆ ಬಹಳಷ್ಟು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸಿದ್ದರು. ಕೆಲ ಹೊತ್ತು ಮಾತುಕತೆ ನಡೆಯಿತು. ಬಳಿಕ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡಲಾಯಿತು.
