ನ್ಯಾಯಾಂಗಕ್ಕೆ ‘ಬೂಸ್ಟರ್’ ಎಲ್ಲಿದೆ?: ಖಾಲಿ ಹುದ್ದೆಗಳ ಭರ್ತಿಯಲ್ಲಿ ವಿಳಂಬಕ್ಕೆ ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ತರಾಟೆ

ಮುಂಬೈ,ಫೆ.4: ದೇಶಾದ್ಯಂತ ಖಾಲಿ ಇರುವ ನ್ಯಾಯಾಂಗ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಳಂಬದ ಬಗ್ಗೆ ಶುಕ್ರವಾರ ಹತಾಶೆ ವ್ಯಕ್ತಪಡಿಸಿದ ಬಾಂಬೆ ಉಚ್ಚ ನ್ಯಾಯಾಲಯವು, ನ್ಯಾಯಾಂಗಕ್ಕೆ ‘ಬೂಸ್ಟರ್ (ಉತ್ತೇಜನ)’ ನೀಡುವ ಬಗ್ಗೆ ಯಾವಾಗ ಯೋಚಿಸುತ್ತೀರಿ ಎಂದು ಕೇಂದ್ರವನ್ನು ಪ್ರಶ್ನಿಸಿತು.
ದೇಶದ ಆರ್ಥಿಕತೆಗೆ ಉತ್ತೇಜನ ದೊರೆಯಬೇಕು ಎಂದು ಸರಕಾರವು ಬಯಸಿದ್ದರೆ ಹಣಕಾಸು ಬಾಕಿಗಳನ್ನು ಮರುವಸೂಲು ಮಾಡಲು ಬ್ಯಾಂಕುಗಳಿಗೆ ನೆರವಾಗುವ ನ್ಯಾಯಮಂಡಲಿಗಳಲ್ಲಿಯ ಖಾಲಿ ಹುದ್ದೆಗಳನ್ನೇಕೆ ಭರ್ತಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ನ್ಯಾಯಾಲಯವು,‘ಈ ದಿನಗಳಲ್ಲಿ ನಾವು ಬೂಸ್ಟರ್ ಗಳ ಬಗ್ಗೆ ಮಾತನಾಡುತ್ತಿದ್ದೇವೆ. ಬೂಸ್ಟರ್ ಲಸಿಕೆಗಳು, ಆರ್ಥಿಕತೆಗೆ ಬೂಸ್ಟರ್ ಇತ್ಯಾದಿ... ಪ್ರಸಕ್ತ ಮುಂಗಡಪತ್ರವು ದೇಶದ ಆರ್ಥಿಕತೆಗೆ ಬೂಸ್ಟರ್ ಆಗಿದೆ ಎಂದೂ ನಾವು ಎಲ್ಲಿಯೋ ಓದಿದ್ದೇವೆ. ಆದರೆ ನ್ಯಾಯಾಂಗಕ್ಕೆ ಬೂಸ್ಟರ್ ಎಲ್ಲಿದೆ ’ಎಂದು ಕೇಳಿತು.
ಮುಂಬೈನಲ್ಲಿರುವ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿ (ಡಿಆರ್ಎಟಿ)ಗೆ ಅಧ್ಯಕ್ಷರನ್ನು ನೇಮಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶ ಕೋರಿ ಸಲ್ಲಿಸಲಾಗಿರುವ ಎರಡು ರಿಟ್ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶ ದೀಪಾಂಕರ್ ದತ್ತಾ ಮತ್ತು ನ್ಯಾ.ಎಂ.ಎಸ್.ಕಾರ್ಣಿಕ್ ಅವರ ಪೀಠವು ಕೈಗೆತ್ತಿಕೊಂಡಿತ್ತು.
ಡಿಆರ್ಎಟಿ ಅಧ್ಯಕ್ಷರ ಹುದ್ದೆ ಮತ್ತು ರಾಜ್ಯಾದ್ಯಂತ ಹಲವಾರು ಸಾಲ ವಸೂಲಾತಿ ನ್ಯಾಯಮಂಡಳಿ (ಡಿಆರ್ಟಿ)ಗಳ ಅಧ್ಯಕ್ಷರ ಹುದ್ದೆಗಳು ಕಳೆದ ಕೆಲವು ತಿಂಗಳುಗಳಿಂದ ಖಾಲಿಯಾಗಿಯೇ ಉಳಿದಿವೆ. ಪರಿಣಾಮವಾಗಿ ಪರಿಹಾರ ಕೋರಿ ಡಿಆರ್ಟಿಗಳು ಮತ್ತು ಡಿಆರ್ಎಟಿ ಮುಂದೆ ಸಲ್ಲಿಕೆಯಾಗಬೇಕಿದ್ದ ಪ್ರಕರಣಗಳ ಮಹಾಪೂರವೇ ಮುಖ್ಯ ನ್ಯಾಯಾಧೀಶ ದತ್ತಾ ಅವರ ಪೀಠದ ಮುಂದಿದೆ.
ನ್ಯಾಯಾಲಯದ ಹಿಂದಿನ ಆದೇಶಗಳ ಹೊರತಾಗಿಯೂ ಇಂತಹ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಕೇಂದ್ರ ಸರಕಾರದ ವಿಳಂಬದ ಬಗ್ಗೆ ಶುಕ್ರವಾರ ಆಕ್ಷೇಪವನ್ನು ವ್ಯಕ್ತಪಡಿಸಿದ ಪೀಠವು,ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಇಂತಹ ಮೊದಲ ಆದೇಶವನ್ನು ತಾನು 2021,ಡಿ.2ರಂದು ಹೊರಡಿಸಿದ್ದನ್ನು ಬೆಟ್ಟು ಮಾಡಿತು.
ಆದರೆ ವಿಳಂಬಕ್ಕೆ ಕಾರಣವೇನು ಎನ್ನುವುದನ್ನು ಸಹ ಸರಕಾರವು ಈವರೆಗೆ ವಿವರಿಸಿಲ್ಲ ಎಂದ ಪೀಠವು,ದೇಶದ ಆರ್ಥಿಕ ರಾಜಧಾನಿಯಾದ ಮುಂಬೈನಂತಹ ನಗರದಲ್ಲಿ ಡಿಆರ್ಎಟಿ ಮಹತ್ವದ ಸಂಸ್ಥೆಯಾಗಿದೆ ಎಂದು ಹೇಳಿತು.
ಡಿಆರ್ಎಟಿ ಹುದ್ದೆಯನ್ನು ಭರ್ತಿ ಮಾಡಲು ಮಾರ್ಗಸೂಚಿಯನ್ನು ಒಳಗೊಂಡಿರುವ ಟಿಪ್ಪಣಿಯೊಂದನ್ನು ಮುಂದಿನ ಗುರುವಾರದೊಳಗೆ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡಿದ ಉಚ್ಚ ನ್ಯಾಯಾಲಯವು, ‘ದಯವಿಟ್ಟು ನ್ಯಾಯಾಲಯದ ಕಳವಳವನ್ನು ನಿಮ್ಮ ಅಧಿಕಾರಿಗಳಿಗೆ ತಿಳಿಸಿ. ಮುಂದಿನ ಗುರುವಾರದ ವೇಳೆಗೆ ಸೂಕ್ತ ಚಿತ್ರಣ ನಮಗೆ ದೊರೆಯದಿದ್ದರೆ ನಾವು ಬೇರೆ ರೀತಿಯಲ್ಲಿ ಯೋಚಿಸಬೇಕಾಗಬಹುದು ’ ಎಂದು ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರಿಗೆ ತಿಳಿಸಿತು.
ʼಒಂದೆಡೆ ಆರ್ಥಿಕತೆಯನ್ನು ಉತ್ತೇಜಿಸಲು ನಾವು ಬಯಸುತ್ತೇವೆ ಮತ್ತು ಇನ್ನೊಂದೆಡೆ ಸಾಲಗಳ ವಸೂಲಿಗೆ ಬ್ಯಾಂಕುಗಳಿಗೆ ನಾವು ಅವಕಾಶ ನೀಡುತ್ತಿಲ್ಲ’ ಎಂದು ಹೇಳಿದ ಉಚ್ಚ ನ್ಯಾಯಾಲಯವು,ದೇಶಾದ್ಯಂತ ನ್ಯಾಯಾಂಗದಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರಕಾರವು ಸೂಕ್ತ ಪರಿಗಣನೆಯನ್ನು ನೀಡಬೇಕು ಎಂದು ತಿಳಿಸಿತು.