ಗೆಳತಿಯನ್ನು ಟ್ರಾಲಿ ಬ್ಯಾಗ್ನಲ್ಲಿ ಹಾಸ್ಟೆಲ್ಗೆ ಸಾಗಿಸಿ ಸಿಕ್ಕಿಬಿದ್ದ ಮಣಿಪಾಲ ವಿದ್ಯಾರ್ಥಿ !

ಫೈಲ್ ಫೋಟೊ
ಉಡುಪಿ, ಫೆ.4: ಮಣಿಪಾಲದ ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಟ್ರಾಲಿ ಬ್ಯಾಗ್ನಲ್ಲಿ ಹಾಕಿ ಹಾಸ್ಟೆಲ್ಗೆ ಸಾಗಿಸುವ ಪ್ರಯತ್ನದಲ್ಲಿದ್ದಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಮಣಿಪಾಲ ಕಾಲೇಜೊಂದರಲ್ಲಿ ನಡೆದಿದೆ.
ಮಣಿಪಾಲ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಯುವಕರ ಹಾಸ್ಟೆಲ್ನಲ್ಲಿ ಫೆ.1ರ ಬೆಳಗ್ಗೆ ಈ ಘಟನೆ ನಡೆದಿದೆ. ಆದರೆ ಇದೇ ರೀತಿಯ ಘಟನೆಯೊಂದು 2019ರ ಮಾರ್ಚ್ ತಿಂಗಳಲ್ಲಿ ಡೆಹ್ರಾಡೂನ್ನಲ್ಲಿ ನಡೆದಿದ್ದು, ಇದೀಗ ಆ ವೀಡಿಯೊ ಮಣಿಪಾಲದಲ್ಲಿ ಘಟನೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೀಡಿಯೊಕ್ಕೆ ಸಂಬಂಧಿಸಿದಂತೆ ನಿನ್ನೆ ಮಾಹೆಯ ಹಿರಿಯ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದು, ವೀಡಿಯೊದಲ್ಲಿರುವ ಘಟನೆಗೂ ಮಾಹೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಅದನ್ನು ಯಥಾವತ್ತಾಗಿ ಹೋಲುವ ಘಟನೆ ಮಣಿಪಾಲದಲ್ಲಿ ನಡೆದಿರುವುದು ಈಗ ಬಹಿರಂಗಗೊಂಡಿದೆ.
ಮಣಿಪಾಲದ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಉತ್ತರ ಭಾರತದ 20ರ ಹರೆಯದ ವಿದ್ಯಾರ್ಥಿಯೊಬ್ಬ, 19 ವರ್ಷದ ತನ್ನ ಸ್ನೇಹಿತೆಯನ್ನು ತನ್ನ ಹಾಸ್ಟೆಲ್ಗೆ ಕರೆದೊಯ್ಯುವ ಯೋಜನೆ ರೂಪಿಸಿ, ಅದಕ್ಕಾಗಿ ಎಲ್ಲರ ಕಣ್ಣು ತಪ್ಪಿಸಲು ಟ್ರಾಲಿಬ್ಯಾಗ್ನಲ್ಲಿ ಆಕೆಯನ್ನು ತುಂಬಿ ಅದನ್ನು ತೆಗೆದುಕೊಂಡು ಹೋಗುವಾಗ ಸಿಕ್ಕಿಬಿದ್ದಿದ್ದ.
ಅಷ್ಟು ದೊಡ್ಡ ಗಾತ್ರ ಟ್ರಾಲಿಬ್ಯಾಗ್ ಹಾಗೂ ಅದರ ಭಾರದಿಂದ ಸಂಶಯಗೊಂಡ ಹಾಸ್ಟೆಲ್ನ ಕೇರ್ಟೇಕರ್ ಈ ಬಗ್ಗೆ ವಿದ್ಯಾರ್ಥಿಯನ್ನು ಪ್ರಶ್ನಿಸಿದಾಗ, ಆತ ನೀಡಿದ ಉತ್ತರ ಅವರ ಸಂಶಯವನ್ನು ಇನ್ನಷ್ಟು ಬಲಪಡಿಸಿತ್ತು. ತನ್ನ ಅಧ್ಯಯನಕ್ಕೆ ಆನ್ಲೈನ್ನಲ್ಲಿ ಕೆಲವು ಉಪಕರಣ ತರಿಸಿದ್ದೆ. ಅವುಗಳು ಭಾರವಾಗಿವೆ ಎಂದು ಆತ ಉತ್ತರಿಸಿದ್ದ.
ಆತನ ಉತ್ತರದಿಂದ ಅನುಮಾನಗೊಂಡ ಕೇರ್ಟೇಕರ್, ಬ್ಯಾಗ್ ತೆರೆಯುವಂತೆ ತಿಳಿಸಿದ್ದು, ಅದರಂತೆ ಬ್ಯಾಗ್ನ ಜಿಪ್ ತೆರೆಯುತಿದ್ದಂತೆ ಆತನ ಕೃತ್ಯ ಬಯಲಾಗಿದೆ. ಬ್ಯಾಗ್ನೊಳಗೆ ಮುದುಡಿ ಮಲಗಿದ್ದ ಯುವತಿ ತಡಬಡಿಸಿ ಎದ್ದು ನಿಂತಿದ್ದಳು. ಆದರೆ ಅಷ್ಟು ಹೊತ್ತು ಬ್ಯಾಗ್ನೊಳಗಿದ್ದರೂ ಆಕೆಗೆ ಯಾವುದೇ ಅಪಾಯವಾಗಲೀ, ಆರೋಗ್ಯ ಸಮಸ್ಯೆಯಾಗಲಿ ಉಂಟಾಗಿಲ್ಲ ಎಂದು ಹೇಳಲಾಗಿದೆ.
ಉತ್ತರ ಭಾರತದವರೇ ಆದ ಈ ಯುವತಿ ಮಣಿಪಾಲದ ಇನ್ನೊಂದು ಕಾಲೇಜಿನ ವಿದ್ಯಾರ್ಥಿನಿ ಎಂದು ಹೇಳಲಾಗಿದ್ದು, ಇಬ್ಬರೂ ಮಣಿಪಾಲ ಕ್ಯಾಂಪಸ್ನಲ್ಲೇ ವಾಸವಾಗಿದ್ದರು. ಕಾಲೇಜು ಅಧಿಕಾರಿಗಳು ಇದೀಗ ಇಬ್ಬರನ್ನು ಕರೆದು ಎಚ್ಚರಿಕೆ ನೀಡಿದ್ದು, ಅವರಿಂದ ಮುಚ್ಚಳಿಕೆ ಬರೆಸಿಕೊಂಡು ಇಬ್ಬರನ್ನು ಹಾಸ್ಟೆಲ್ನಿಂದ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶಿಸ್ತು ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಲಾಗಿದೆ.







