ಬಾಬಾ ಬುಡನ್‍ಗಿರಿ ವಿವಾದ: ಫೆ.7ಕ್ಕೆ ಸಚಿವ ಸಂಪುಟ ಉಪಸಮಿತಿಯಿಂದ ಅಹವಾಲು ಸ್ವೀಕಾರ ಸಭೆ
ಜಿಲ್ಲಾಡಳಿತದಿಂದ ಸಕಲ ಸಿದ್ಧತೆ; ಟೋಕನ್ ಪಡೆದು ಸಮಿತಿ ಮುಂದೆ ಹಾಜರಾಗಲು ಡಿಸಿ ಮನವಿ

ಚಿಕ್ಕಮಗಳೂರು, ಫೆ.4: ಗುರು ದತ್ತಾತ್ರೇಯ ಬಾಬಾ ಬುಡನ್‍ದರ್ಗಾದಲ್ಲಿನ ಪೂಜಾ ವಿಧಿ ವಿಧಾನಗಳ ಕುರಿತು ಉಚ್ಚನ್ಯಾಯಾಲಯ ಸಚಿವ ಸಂಪುಟ ಉಪಸಮಿತಿ ರಚಿಸಿ ನಿರ್ಣಯ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಸರಕಾರ ಈ ಸಂಬಂಧ ಸಚಿವ ಸಂಪುಟ ಮಟ್ಟದಲ್ಲಿ ಉಪಸಮಿತಿಯನ್ನು ರಚಿಸಿದೆ. ಈ ಸಮಿತಿ ಸದಸ್ಯರು ಫೆ.7ರಂದು ಜಿಲ್ಲೆಗೆ ಆಗಮಿಸಿ ಸಾರ್ವಜನಿಕರಿಂದ ದಾಖಲೆ ಮತ್ತು ಅಹವಾಲು ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸಚಿವ ಮಾಧುಸ್ವಾಮಿ, ಇಂಧನ ಸಚಿವ ಸುನಿಲ್‍ಕುಮಾರ್, ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಮೀನುಗಾರಿಕೆ ಇಲಾಖೆ ಸಚಿವ ಎಸ್.ಅಂಗಾರ ಅವರು ಸಮಿತಿಯಲ್ಲಿದ್ದು, ಫೆ.7ರಂದು ಸಮಿತಿ ಸದಸ್ಯರು ಜಿಲ್ಲೆಗೆ ಭೇಟಿನೀಡಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಬಾಬಾ ಬುಡನ್‍ಗಿರಿ ದರ್ಗಾಕ್ಕೆ ಸಂಬಂಧಿಸಿದ ದಾಖಲೆ, ಅಹವಾಲು ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಚಿವ ಸಂಪುಟ ಉಪಸಮಿತಿ ಜಿಲ್ಲೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯದ ಮೊರೆ ಹೋಗಿರುವ ಯೋಗೀಶ್ ರಾಜ್ ಅರಸ್ ಮತ್ತು ಗೌಸ್ ಮೊಹಿದ್ದೀನ್ ಅವರನ್ನು ಸಭೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದ ಅವರು, ಸಮಿತಿಗೆ ಸಾರ್ವಜನಿಕರು ದಾಖಲೆ, ಅಹವಾಲುಗಳನ್ನು ಸಲ್ಲಿಸಲು ಅವಕಾಶವಿದ್ದು, ಹೇಳಿಕೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ಅವಕಾಶವಿದೆ. ದಾಖಲೆ ಮತ್ತು ಅಹವಾಲು ಸಲ್ಲಿಸುವವರು ತಮ್ಮ ಹೆಸರನ್ನು ಮೊದಲೇ ನೋಂದಾಯಿಸಿಕೊಂಡು ಟೋಕನ್ ಪಡೆದುಕೊಳ್ಳಬೇಕು. ಟೋಕನ್‍ನಂತೆ ಸರದಿ ಪ್ರಕಾರ ದಾಖಲೆ, ಅಹವಾಲು ಸಲ್ಲಿಸುವವರನ್ನು ಸಮಿತಿ ಮುಂದೆ ಹಾಜರುಪಡಿಸಲಾಗುವುದು ಎಂದರು.
ಸಾರ್ವಜನಿಕರು ಹೆಸರು ನೋಂದಾಯಿಸಲು ಮತ್ತು ಟೋಕನ್ ಪಡೆದುಕೊಳ್ಳಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕೊಠಡಿ ಸಂಖ್ಯೆ 20ರ ಮುಜರಾಯಿ ಇಲಾಖೆ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ದೂರವಾಣಿ ಮೂಲಕವೂ ದಾಖಲೆ, ಅಹವಾಲು ಸಲ್ಲಿಸುವವರ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ದೂರವಾಣಿ ಮೂಲಕ ಹೆಸರು ನೋಂದಾಯಿಸುವವರು 0862-295196 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಹುದು ಎಂದು ಹೇಳಿದರು.
ಸಮಿತಿ ಮುಂದೆ ಅಹವಾಲು, ದಾಖಲೆ ಸಲ್ಲಿಸಲು ಬರುವ ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸಬೇಕು. ಸಾರ್ವಜನಿಕರ ತಂಡ ಮತ್ತು ಸಂಘ ಸಂಸ್ಥೆಗಳಿಂದ ಬಂದು ದಾಖಲೆಗಳನ್ನು ಸಲ್ಲಿಸುವ ವೇಳೆ 5 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಮೊದಲು ಟೋಕನ್ ಪಡೆದುಕೊಂಡವರಿಗೆ ಮೊದಲ ಅವಕಾಶ ನೀಡಲಾಗುವುದು. ಒಬ್ಬರ ನಂತರ ಮತ್ತೊಬ್ಬರಿಗೆ ಸರದಿಯಂತೆ ಅವಕಾಶ ನೀಡಲಾಗುವುದು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಸಭೆಯ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಅನ್ನೂ ನಿಯೋಜಿಸಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ಜನರು ಗುಂಪುಗೂಡಲು ಅವಕಾಶವಿಲ್ಲ, ಹೆಸರು ನೋಂದಾಯಿಸಿ ಟೋಕನ್ ಪಡೆದುಕೊಂಡವರಿಗೆ ಮಾತ್ರ ಜಿಲ್ಲಾಧಿಕಾರಿ ಕಚೇರಿ ಆವರಣ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಉಪಸ್ಥಿತರಿದ್ದರು.
ಸಚಿವ ಸಂಪುಟ ಉಪಸಮಿತಿ ಸಭೆ ಮುಂದೂಡಲು ಮನವಿ: ಗುರು ದತ್ತಾತ್ರೇಯ ಬಾಬಾ ಬುಡನ್‍ಗಿರಿ ದರ್ಗಾ ವಿವಾದ ಸಂಬಂಧ ಸರಕಾರ ರಚಿಸಿರುವ ಸಚಿವ ಸಂಪುಟ ಉಪಸಮಿತಿಯುವ ಫೆ.7ರಂದು ಸಾರ್ವಜನಿಕರಿಂದ ದಾಖಲೆ, ಅಹವಾಲು ಸಲ್ಲಿಕೆ ಸಂಬಂಧ ಸಭೆ ನಡೆಸುತ್ತಿದ್ದು, ಈ ಸಂಬಂಧ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿರುವ ಮಧ್ಯೆ ನಗರದ ಜಾಮಿಯಾ ಮಸೀದಿ ಕಮಿಟಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸಭೆಯನ್ನು ಮುಂದೂಡಲು ಕೋರಿಕೊಂಡಿದೆ.
ಶುಕ್ರವಾರ ಜಿಲ್ಲಾಧಿಕಾರಿಗೆ ಈ ಸಂಬಂಧ ಮನವಿ ಸಲ್ಲಿಸಿರುವ ಕಮಿಟಿ ಮುಖಂಡರು, ಉಪಸಮಿತಿಗೆ ಬಾಬಾಬುಡಗಿರಿ ವಿವಾದ ಸಂಬಂಧ ಜಿಲ್ಲೆಯ ವಿವಿಧ ಭಾಗಗಳಿಂದ ಸಾರ್ವಜನಿಕರು ಆಗಮಿಸಿ ದಾಖಲೆ ಸಲ್ಲಿಸಲು ಮುಂದಾಗಿದ್ದಾರೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಯಲ್ಲಿ ಸಭೆಯನ್ನು ಮುಂದೂಡಬೇಕೆಂದು ಮನವಿ ಮಾಡಿದ್ದಾರೆ.







