ಪ್ರತಿಷ್ಠಿತ ಕಂಪೆನಿ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಜಾಲ ಪತ್ತೆ: ಕೋಟಿ ರೂ.ಮೌಲ್ಯದ ವಸ್ತು ವಶ
ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆ

ಬೆಂಗಳೂರು, ಫೆ.4: ಪ್ರತಿಷ್ಠಿತ ಕಂಪೆನಿ ಹೆಸರಿನಲ್ಲಿ ಮೊಬೈಲ್ ಅಕ್ಸೆಸರೀಸ್ ಸೇರಿ ಇನ್ನಿತರ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿ ಒಂದು ಕೋಟಿ ರೂ.ಮೌಲ್ಯದ ನಕಲಿ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಎಸ್‍ಜೆ ಪಾರ್ಕ್ ವ್ಯಾಪ್ತಿಯಲ್ಲಿರುವ ಎಸ್ಪಿ ರಸ್ತೆ, ಶ್ರೀ ವಿನಾಯಕ ಎಲೆಕ್ಟ್ರಾನಿಕ್ ಫ್ಲಾಜಾದ 3ನೆ ಮಹಡಿಯಲ್ಲಿ ಪ್ರಕಾಶ್ ಟೆಲಿಕಾಂ ಅಂಗಡಿ ಇದೆ. ದೇಶಾದ್ಯಂತ ಮೊಬೈಲ್ ಅಕ್ಸೆಸರೀಸ್‍ಗಳ ಪೂರೈಕೆದಾರರಾಗಿದ್ದು, ಇವರು ಪ್ರತಿಷ್ಠಿತ ಕಂಪೆನಿಗಳಾದ ಸ್ಯಾಮ್ಸಂಗ್ ಸೇರಿ ಇತರೆ ಕಂಪೆನಿಗಳ ಹೆಸರಿನಲ್ಲಿ ನಕಲಿ ಮೊಬೈಲ್ ಅಕ್ಸೆಸರೀಸ್‍ಗಳನ್ನು ಮತ್ತು ಬ್ಲೂಟೂಥ್ ಸ್ಪೀಕರ್ ಉತ್ಪನ್ನಗಳನ್ನು ದಾಸ್ತಾನು ಮಾಡಲಾಗಿತ್ತು.
ಇವುಗಳು ಪ್ರತಿಷ್ಠಿತ ಕಂಪೆನಿಗಳ ಅಸಲಿ ಮಾಲುಗಳೆಂದು ಸಾರ್ವಜನಿಕರನ್ನು ನಂಬಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಮೋಸ ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಬಂದಿದೆ. ತಕ್ಷಣ ಅಂಗಡಿ ಮೇಲೆ ದಾಳಿ ಮಾಡಿ ಬರೋಬ್ಬರಿ ಒಂದು ಕೋಟಿ ರೂ. ಬೆಲೆ ಬಾಳುವ ಪ್ರತಿಷ್ಠಿತ ಕಂಪೆನಿಗಳ ಹೆಸರಿನ ನಕಲಿ ಮೊಬೈಲ್ ಅಕ್ಸೆಸರೀಸ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಎಸ್‍ಜೆ ಪಾರ್ಕ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





