ಬಿಜೆಪಿಯಿಂದ ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳ ಬಳಕೆ: ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್

ಬೆಂಗಳೂರು, ಫೆ.4: ಹೆಣ್ಣು ಮಕ್ಕಳು ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬರುವುದನ್ನು ವಿರೋಧಿಸಲು ಗಂಡು ಮಕ್ಕಳಿಗೆ ನಿನ್ನೆ ಕೆಲವೆಡೆ ಕೇಸರಿ ಶಾಲುಗಳನ್ನು ಹಾಕಿಸಿ ಕಳುಹಿಸಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿರುವುದು ನೋವುಂಟು ಮಾಡಿದೆ ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ನಿನ್ನೆ ಕುಂದಾಪುರದಲ್ಲಿ ಸ್ವತಃ ಪ್ರಾಂಶುಪಾಲರೆ ಗೇಟ್ ಬಳಿ ನಿಂತುಕೊಂಡು ಹಿಜಾಬ್ ಧರಿಸಿಕೊಂಡು ಬಂದ ಹೆಣ್ಣು ಮಕ್ಕಳು ಕಾಲೇಜು ಆವರಣ ಪ್ರವೇಶಿಸದಂತೆ ತಡೆದಿರುವುದು ನೋಡಿದರೆ ಇದೊಂದು ರಾಜಕೀಯದಾಟದಂತೆ ಕಾಣುತ್ತಿದೆ. ವಿದ್ಯಾರ್ಥಿಗಳಿಗೆ ಜಾತಿ ಎಂದರೆ ಏನು ಅಂತಾ ಗೊತ್ತಿಲ್ಲ. ಅವರಿಗೆ ನಿನ್ನೆ ಕೇಸರಿ ಶಾಲು ಹಾಕಿಸಿ ಕಳುಹಿಸಿಕೊಟ್ಟಿದ್ದಾರಲ್ಲ ಇದು ಎಷ್ಟರ ಮಟ್ಟಿಗೆ ಸರಿ ಎಂದು ಝಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.
ನಮ್ಮ ದೇಶದಲ್ಲಿ ಏನು ಆಗುತ್ತಿದೆ? ಬಿಜೆಪಿಯವರು ಏನು ಮಾಡಲು ಹೊರಟಿದ್ದಾರೆ? ಹಿಜಾಬ್ ಧರಿಸುವುದು ಹೆಣ್ಣು ಮಕ್ಕಳ ಮೂಲಭೂತ ಹಕ್ಕು. ಯಾವ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುವಂತಿಲ್ಲ, ಹಿಜಾಬ್ ಧರಿಸುವಂತಿಲ್ಲ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಹಿಜಾಬ್ ಅನ್ನು ನಿನ್ನೆ, ಮೊನ್ನೆಯಿಂದ ಧರಿಸುತ್ತಿಲ್ಲ. ನೂರಾರು ವರ್ಷಗಳಿಂದ ಹೆಣ್ಣು ಮಕ್ಕಳು ಅದನ್ನು ಧರಿಸುತ್ತಿದ್ದಾರೆ. ಗಂಡು ಮಕ್ಕಳಿಗೆ ಕೇಸರಿ ಶಾಲನ್ನು ನಿನ್ನೆ ಹಾಕಿಸಿರುವುದು ಎಂದು ಅವರು ಹೇಳಿದರು.
ಈಗ ಪ್ರಕರಣ ನ್ಯಾಯಾಲಯದ ಮೇಟ್ಟಿಲೇರಿದೆ. ಅಲ್ಲಿ ಏನು ತೀರ್ಮಾನ ಆಗುತ್ತೆ ನೋಡೋಣ. ನ್ಯಾಯಾಲಯದ ತೀರ್ಪಿಗೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.







