ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡದಂತೆ ರೈತ ಮುಖಂಡ ರಾಕೇಶ್ ಟಿಕಾಯತ್ ಕರೆ

ಹೊಸದಿಲ್ಲಿ, ಫೆ. 4: ಫೆಬ್ರವರಿ 10ರಿಂದ ಆರಂಭವಾಗಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡದಂತೆ ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ನಾಯಕ ರಾಕೇಶ್ ಟಿಕಾಯತ್ ಶುಕ್ರವಾರ ಮತದಾರರಲ್ಲಿ ಮನವಿ ಮಾಡಿದ್ದಾರೆ. ತನ್ನ ಮೈಕ್ರೊ ಬ್ಲಾಗಿಂಗ್ ಸೈಟ್ ‘ಕೂ’ನಲ್ಲಿ ಹ್ಯಾಷ್ ಟ್ಯಾಗ್ ‘ನೋ ವೋಟ್ ಟು ಬಿಜೆಪಿ’ಯೊಂದಿಗೆ ಹಿಂದಿಯಲ್ಲಿ ಅವರು ಈ ಮನವಿ ಪೋಸ್ಟ್ ಮಾಡಿದ್ದಾರೆ.
ರೈತರ ಹಿತಾಸಕ್ತಿಗಾಗಿ ಚಳುವಳಿ ಯಾವತ್ತೂ ನಡೆಯುತ್ತಲೇ ಇರುತ್ತದೆ ಎಂದು ಟಿಕಾಯತ್ ಹೇಳಿದ್ದಾರೆ. ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಒಂದು ವರ್ಷಗಳ ದೀರ್ಘ ಕಾಲ ನಡೆದ ಪ್ರತಿಭಟನೆಯ ನಾಯಕತ್ವ ವಹಿಸಿದ್ದ ಟಿಕಾಯತ್ ತನ್ನ ಹಿಂದಿನ ನಿಲುವಿನಿಂದ ಯೂಟರ್ನ್ ತೆಗೆದುಕೊಂಡಿದ್ದಾರೆ. ಜನವರಿ 19ರಂದು ಅವರು ತನ್ನ ‘ಕೂ’ನಲ್ಲಿ ‘‘ರೈತರು ಲಾಭ ಹಾಗೂ ನಷ್ಟವನ್ನು ಗಮನಿಸುತ್ತಾರೆ. ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಮತ ನೀಡುವುದಿಲ್ಲ’’ ಎಂದಿದ್ದರು.
ಇದೇ ರೀತಿ ನರೇಶ್ ಅವರ ಸಹೋದರ ಹಾಗೂ ಬಿಕೆಯು ಅಧ್ಯಕ್ಷರಾಗಿರುವ ನರೇಶ್ ಟಿಕಾಯತ್ ಕೂಡ ವಿಧಾನ ಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ತಮ್ಮ ಸಂಘಟನೆಯ ಬೆಂಬಲದ ಕುರಿತಂತೆ ತಿರುವು ಮುರುವು ಹೇಳಿಕೆ ನೀಡುತ್ತಿದ್ದಾರೆ. ನರೇಶ್ ಟಿಕಾಯತ್ ಮೊದಲು ಮುಂಬರುವ ಉತ್ತರಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ)ದ ಮೈತ್ರಿಕೂಟಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು.







