ವಸ್ತ್ರಧಾರಣೆಯ ಆಧಾರದಲ್ಲಿ ಶಿಕ್ಷಣದಿಂದ ವಂಚಿತಗೊಳಿಸಬಾರದು: ಎಸ್‌ಐಒ ಕರ್ನಾಟಕ ರಾಜ್ಯ ಸಮಿತಿ
ಬೆಂಗಳೂರು, ಫೆ.4: ಶಿಕ್ಷಣವು ಮನುಷ್ಯನ ಮೂಲಭೂತ ಹಕ್ಕಾಗಿದ್ದು, ವಸ್ತ್ರಧಾರಣೆಯ ಆಧಾರದಲ್ಲಿ ಈ ಮೂಲಭೂತ ಹಕ್ಕಿನಿಂದ ವಿದ್ಯಾರ್ಥಿನಿಯರನ್ನು ವಂಚಿತಗೊಳಿಸಿವುದು ಆಘಾತಕಾರಿ ಮತ್ತು ಸ್ವೀಕಾರಾರ್ಹವಲ್ಲ ಎಂದು ಎಸ್‌ಐಒ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ನಾಸೀರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶಿಸದಂತೆ ಉಡುಪಿ ಜಿಲ್ಲೆಯ ಎರಡು ಸರಕಾರಿ ಕಾಲೇಜಿನ ಪ್ರಾಂಶುಪಾಲರು ಗೇಟ್‌ಗಳನ್ನು ಮುಚ್ಚಿರುವುದು ಅತ್ಯಂತ ಕಳವಳಕಾರಿಯಾಗಿದೆ. ಈ ರೀತಿಯ ಹಠಾತ್ ಮತ್ತು ಅನಿಯಂತ್ರಿತ ಕ್ರಮಗಳು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಈ ವಿಚಾರಕ್ಕೆ ರಾಜಕೀಯ ಬಣ್ಣ ನೀಡುವ ಪ್ರಯತ್ನವೂ ಖಂಡನೀಯ. ಕಾಲೇಜಿನ ಪ್ರಾಂಶುಪಾಲರು ಯಾವುದೇ ಗುಂಪಿನ ಒತ್ತಡದಲ್ಲಿ ಕಾರ್ಯನಿರ್ವಹಿಸಬಾರದು ಎಂದು ತಿಳಿಸಿದ್ದಾರೆ.
ಹಿಜಾಬ್ ಧರಿಸುವುದಕ್ಕೆ ಯಾರೂ ಅಸಹನೆ ವ್ಯಕ್ತಪಡಿಸಬಾರದು. ಅದು ವ್ಯಕ್ತಿಯೋರ್ವರ ವೈಯುಕ್ತಿಕ ಹಕ್ಕಾಗಿ ಉಳಿಯಬೇಕು. ಶಿಕ್ಷಣವು ಮೂಲಭೂತ ಹಕ್ಕಾಗಿದೆ ಮತ್ತು ಆ ಬಗ್ಗೆ ನಿರ್ಬಂಧ ವಿಧಿಸಕೂಡದು. ತರಗತಿ ಕೊಠಡಿಗಳು ಕೇವಲ ಪಠ್ಯಕ್ರಮದಲ್ಲಿ ಸೂಚಿಸಲಾದ ವಿಷಯಗಳ ಕಲಿಕೆಗೆ ಮಾತ್ರ ಸೀಮಿತವಲ್ಲ ಬದಲಾಗಿ ಸಂವಹನದ ಮಾಡುವ ಸ್ಥಳವಾಗಿದೆ. ಪರಸ್ಪರ ಗೌರವದ ಆಧಾರದ ಮೇಲೆ ಒಬ್ಬರನೊಬ್ಬರು ಅರ್ಥಮಾಡಿಕೊಳ್ಳುವ ಮೂಲಕ ಸಂಬಂಧಗಳನ್ನು ವೃದ್ಧಿಪಡಿಸುವ ಕೇಂದ್ರವಾಗಿದೆ ಎಂದು ತಿಳಿಸಿದ್ದಾರೆ.
ಏಕರೂಪತೆಯನ್ನು ಹೇರಲು ಸಮವಸ್ತ್ರ ಅಥವಾ ಡ್ರೆಸ್‌ಕೋಡ್ ಬಳಸಬಾರದು. ಹಾಗಾಗಿ ವಿದ್ಯಾರ್ಥಿನಿಯರನ್ನು ತರಗತಿ ಪ್ರವೇಶಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.







