ಗುರುವಿಗೆ ಮೋಸ ಮಾಡಿದವರಿಂದ ಹಿಜಾಬ್ ವಿವಾದ ಸೃಷ್ಟಿ
ಮಾನ್ಯರೇ,
ಉಡುಪಿ, ಕುಂದಾಪುರ ಮತ್ತಿತರ ಕಡೆಗಳಲ್ಲಿ ಹರಡುತ್ತಿರುವ ಮುಸ್ಲಿಮ್ ವಿದ್ಯಾರ್ಥಿನಿಯರ ಶಿರವಸ್ತ್ರಕ್ಕೆ ವಿರೋಧ ಅಭಿಯಾನವನ್ನು ಗಮನಿಸಿ ನೋಡಿ. ಇದು ಇದ್ದಕ್ಕಿದ್ದಂತೆ ಘಟಿಸಿದ ವಿದ್ಯಮಾನವಲ್ಲ. ಇದರ ಹಿಂದೆ ಒಂದು ಷಡ್ಯಂತ್ರ ಇರುವುದು ಎದ್ದು ಕಾಣುತ್ತದೆ. ಸಂಘ ಪರಿವಾರ ಮತ್ತು ಬಿಜೆಪಿಯ ಹತಾಶೆಯ ಪರಿಣಾಮವಾಗಿ ಇಂತಹದೊಂದು ಇಶ್ಯು ಸೃಷ್ಟಿಸುವ ಹುನ್ನಾರ ನಡೆದಿರುವುದು ಸ್ಪಷ್ಟ. ಕುಂದಾಪುರದಲ್ಲಂತೂ ಹಿಜಾಬ್ ಧರಿಸುವುದು ಯಾರಿಗೂ ಯಾವತ್ತೂ ಸಮಸ್ಯೆ ಆಗಿರಲೇ ಇಲ್ಲ. ಈಗ ಇದ್ದಕ್ಕಿದ್ದಂತೆ ಅದಕ್ಕೊಂದು ರೂಲ್ಸು, ಗೇಟು ಬಂದ್ ಮಾಡುವುದು ಇತ್ಯಾದಿ ನಡೆದಿರುವುದು ಕರಾವಳಿಯಲ್ಲಿ ಮತ್ತೆ ಹಿಂದೂ-ಮುಸ್ಲಿಮ್ ಎಂದು ಜನರನ್ನು ಕಚ್ಚಾಡಿಸಲು ಹೂಡಿದ ಕುತಂತ್ರ. ಕಳೆದ ಕೆಲವು ದಿನಗಳ ವಿದ್ಯಮಾನಗಳು ಹಾಗೂ ಅವುಗಳಲ್ಲಿ ಬಿಜೆಪಿ ಪರಿವಾರಕ್ಕೆ ಆಗಿರುವ ಭಾರೀ ಮುಖಭಂಗವೇ ಇದಕ್ಕೆ ಪುರಾವೆ. ಆರ್ಥಿಕತೆ ಕುಸಿದು ಕೂತಿದೆ, ಅದರ ಮೇಲೆ ಅನಗತ್ಯವಾಗಿ ಕರ್ಫ್ಯೂ ಹೇರಿ ಹೈರಾಣಾಗಿಸಿ ಜನರ ಆಕ್ರೋಶಕ್ಕೆ ಸರಕಾರ ಗುರಿಯಾಯಿತು. ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಮೋದಿ ಸರಕಾರ ಅವಕಾಶ ನೀಡದೆ, ಅವಮಾನ ಮಾಡಿದ್ದು ಬಿಲ್ಲವರ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ಗುರುವಿನ ಬದಲು ಶಂಕರಾಚಾರ್ಯರ ಸ್ತಬ್ಧ ಚಿತ್ರ ಇಡಲು ಹೊರಟ ಬಿಜೆಪಿ ವಿರುದ್ಧ ಇಡೀ ಕರಾವಳಿಯಲ್ಲಿ ಬಿಲ್ಲವರಿಂದ ಜಾಥಾವೇ ನಡೆಯಿತು. ಬಿಜೆಪಿಯ ಓಟ್ ಬ್ಯಾಂಕ್‌ನಂತಿದ್ದ ಬಿಲ್ಲವರು ಜಾಗೃತರಾದರು. ಅನ್ಯಾಯದ ವಿರುದ್ಧ ಬೀದಿಗಿಳಿದರು. ಆಗಲೇ ಸಂಘ ಪರಿವಾರಕ್ಕೆ ಅಪಾಯದ ಅರಿವಾಗಿದೆ. ಇದನ್ನು ಹೀಗೇ ಬಿಟ್ಟರೆ ನಮ್ಮ ಬುಡಕ್ಕೇ ಬರುತ್ತದೆ ಎಂದು ಗೊತ್ತಾಗಿದೆ. ಅದಕ್ಕೆ ಪ್ರತಿಯಾಗಿ ಅವರ ಹಳೇ ಹಿಂದೂ-ಮುಸ್ಲಿಮ್ ಯೋಜನೆ ಜಾರಿಗೆ ಬಂದಿದೆ. ಅದರ ಭಾಗವೇ ಈ ಹಿಜಾಬ್ ವಿವಾದ. ಜನರು ತಮ್ಮ ದಿನನಿತ್ಯದ ಬವಣೆ, ಅಭಿವೃದ್ಧಿ ಹಾಗೂ ಹಿಂದುಳಿದ ವರ್ಗಗಳ ವಿರುದ್ಧದ ಸಂಘ ಪರಿವಾರದ ಬ್ರಾಹ್ಮಣ್ಯ ಷಡ್ಯಂತ್ರವನ್ನು ನೋಡಬಾರದು, ಚರ್ಚಿಸಬಾರದು, ಅವರು ಯಾವಾಗಲೂ ಹಿಂದೂ-ಮುಸ್ಲಿಮ್ ಗಲಾಟೆಯಲ್ಲಿ ಬಿಝಿಯಾಗಬೇಕು. ಇದು ಅದರ ಪುರಾತನ ಅಜೆಂಡಾ. ಇದನ್ನು ಜನರು ಅರ್ಥಮಾಡಿಕೊಳ್ಳಬೇಕು.





