ನೊಂದವರಿಗೆ ನೆರವಾದ ನೆಮ್ಮದಿ ನನಗಿದೆ: ಬಿ.ಎಸ್.ಯಡಿಯೂರಪ್ಪ
ಕೋವಿಡ್ ಕಥೆಗಳು' ಕೃತಿ ಬಿಡುಗಡೆ

ಬೆಂಗಳೂರು, ಫೆ.4: 'ಕೋವಿಡ್ ಕಾಲದಲ್ಲಿ ಪತ್ರಕರ್ತರು ಎದುರಿಸಿದ ತಲ್ಲಣಗಳಿಗೆ ನಾನು ಸ್ಪಂದಿಸಿದ್ದೇನೆ. ಅವರ ಕುಟುಂಬಗಳ ಕಣ್ಣೀರನ್ನು ಒರೆಸಲು ಒಂದಿಷ್ಟು ಸಹಕಾರಿಯಾಗಿದ್ದೇನೆ ಎನ್ನುವುದು ನನಗೆ ನೆಮ್ಮದಿ ತಂದಿದೆ' ಎಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ನುಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 'ಬಹುರೂಪಿ' ಪ್ರಕಾಶನ ಪ್ರಕಟಿಸಿರುವ 'ಶಿವಾನಂದ ತಗಡೂರು ಹೇಳಿದ ಕೋವಿಡ್ ಕಥೆಗಳು' ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೋವಿಡ್, ನಮ್ಮ ಸಡಿಕಾರ ಎದುರಿಸಿದ ಮಹಾ ಸಮಸ್ಯೆಯಾಗಿತ್ತು. ಪ್ರತಿಯೊಬ್ಬರ ಬದುಕನ್ನೂ ಕೋವಿಡ್ ಅಲುಗಾಡಿಸಿದೆ. ಇಂತಹ ಸಂದರ್ಭದಲ್ಲಿ ಶಿವಾನಂದ ತಗಡೂರು ಅವರು ಈ ಮಾರಣಾಂತಿಕ ರೋಗದಿಂದ ಸಾವನ್ನಪ್ಪಿದ ಕುಟುಂಬಗಳ ಪರವಾಗಿ ನಿಂತದ್ದು ಶ್ಲಾಘನೀಯ. ಅವರ ದೃಢ ಹೋರಾಟದಿಂದಾಗಿ ಅನೇಕ ಕುಟುಂಬಗಳು ನೆಮ್ಮದಿ ಕಂಡಿವೆ ಎಂದರು.
ಕೃತಿ ಬಿಡುಗಡೆ ಮಾಡಿದ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ ಅವರು, ಶಿವಾನಂದ ತಗಡೂರು ಅವರು ಪತ್ರಕರ್ತ ಕುಟುಂಬಗಳಿಗೆ ಬೆಂಬಲವಾಗಿ ನಿಂತದ್ದೇ ಅಲ್ಲದೆ ಅವರ ಕುಟುಂಬದ ಕಣ್ಣೀರ ಕಥೆಗಳನ್ನು ದಾಖಲಿಸಿರುವುದು ಅಭಿನಂದನೀಯ. ಇದರಿಂದಾಗಿ ಒಂದು ಸಂಘ ಮನಸ್ಸು ಮಾಡಿದರೆ ಇಂತಹ ರಚನಾತ್ಮಕ ಕಾರ್ಯ ಮಾಡಬಹುದು ಎಂದು ಗೊತ್ತಾಗುತ್ತದೆ ಎಂದರು.
ಕೃತಿಯ ಲೇಖಕ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕೋವಿಡ್ ಎನ್ನುವ ಮಹಾರೋಗ ಜಗತ್ತಿನ ಎಲ್ಲರನ್ನೂ ನಲುಗಿಸಿದೆ. ನಮ್ಮ ಸುದ್ದಿ ಮನೆಗಳಿಗೆ ಅದು ಕಾಲಿಟ್ಟಾಗ ನಾವು ತಬ್ಬಿಬ್ಬಾಗಿದ್ದೆವು. ಆದರೆ ಸಂಘ ಇಂತಹ ಸಂದರ್ಭದಲ್ಲಿ ಧೀ ಶಕ್ತಿಯಿಂದ ಪತ್ರಕರ್ತರ ಕುಟುಂಬಗಳ ಬೆನ್ನಿಗೆ ನಿಂತಿತು. ಇದು ನಮ್ಮೆಲ್ಲರಿಗೂ ನೆಮ್ಮದಿ ತಂದಿದೆ ಎಂದರು.
'ವಿಶ್ವವಾಣಿ'ಯ ಸಂಪಾದಕರಾದ ವಿಶ್ವೇಶ್ವರ ಭಟ್ ಅವರಿಗೆ ಪಿ.ರಾಮಯ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಸದಾಶಿವ ಶೆಣೈ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ವೂಡೇ ಪಿ. ಕೃಷ್ಣ, ವಾರ್ತಾ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಹೆಚ್.ಬಿ. ದಿನೇಶ್, ಚಲನಚಿತ್ರ ನಟಿ ಸೋನು ಗೌಡ, ಬಹುರೂಪಿಯ ಜಿ.ಎನ್. ಮೋಹನ್ ಮುಖ್ಯ ಅತಿಥಿಗಳಾಗಿದ್ದರು.







