ಕುಂದಾಪುರದಲ್ಲಿ ಮುಂದುವರಿದ ಹಿಜಾಬ್ ಗೆ ವಿರೋಧ: ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ಮೆರವಣಿಗೆ

ಕುಂದಾಪುರ, ಫೆ.5: ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ವಿರೋಧಿಸಿ ಕುಂದಾಪುರ ನಗರದ ಆರ್.ಎನ್ ಶೆಟ್ಟಿ ಮತ್ತು ಭಂಡಾರ್ಕಾರ್ಸ್ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಇಂದು ಬೆಳಗ್ಗೆ ಕೇಸರಿ ಶಾಲು ಧರಿಸಿ ನಗರದಲ್ಲಿ ಮೆರವಣಿಗೆ ನಡೆಸಿದ ಘಟನೆ ನಡೆದಿದೆ.
ಆರ್.ಎನ್ ಶೆಟ್ಟಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕುಂದೇಶ್ವರ ಬಳಿಯಿಂದ ಕೇಸರಿ ಶಾಲು ಧರಿಸಿ ಮೆರವಣಿಗೆ ಮೂಲಕ ಕಾಲೇಜಿಗೆ ಆಗಮಿಸಿದರು. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದರೆ ನಾವು ಕೇಸರಿ ಶಾಲು ಧರಿಸುತ್ತೇವೆ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಜೈ ಶ್ರೀರಾಮ್, ಜೈ ಶಿವಾಜಿ ಎಂದು ಘೋಷಣೆಗಳನ್ನು ಕೂಗಿದರು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಕಾಲೇಜು ಆಡಳಿತ ಮಂಡಳಿಯ ಜೊತೆ ಚರ್ಚಿಸಿದರು. ಗೊಂದಲಮಯ ವಾತಾವರಣದ ಹಿನ್ನೆಲೆಯಲ್ಲಿ ಆರ್.ಎನ್. ಶೆಟ್ಟಿ ಕಾಲೇಜಿಗೆ ಇಂದು ರಜೆ ಘೋಷಣೆ ಮಾಡಲಾಯಿತು. ಬಳಿಕ ವಿದ್ಯಾರ್ಥಿಗಳು ಮನೆಗೆ ತೆರಳಿದರು.
ಇದೇರೀತಿಯಾದ ಘಟನೆ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಬಳಿಯೂ ಕಂಡುಬಂದಿದೆ. ವಿದ್ಯಾರ್ಥಿನಿಯರು ಸಹಿತ ಕೆಲವಷ್ಟು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದರು.
ಕಾಲೇಜ್ ತನಕವೂ ಕೇಸರಿ ಶಾಲು ಧರಿಸಿ ಬಂದು ಬಳಿಕ ಶಾಲು ತೆಗೆದಿಟ್ಟು ಕಾಲೇಜಿಗೆ ಪ್ರವೇಶಿಸಿದರು.
ಸಮಾನ ಸಮವಸ್ತ್ರ ನೀತಿ ಬೇಕು ಎಂದು ಒತ್ತಾಯಿಸಿರುವ ಕೇಸರಿ ಧರಿಸಿ ಬಂದ ವಿದ್ಯಾರ್ಥಿಗಳು, ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದರೆ ನಾವೂ ಕೇಸರಿ ಶಾಲು ಧರಿಸುತ್ತೇವೆ ಎಂದು ಹೇಳುತ್ತಿದ್ದಾರೆ.
ಸ್ಥಳದಲ್ಲಿ ಪೊಲೀಸ್ ಬಿಗು ಬಂದೋಬಸ್ತ್ ಕಲ್ಪಿಸಲಾಗಿದೆ. ಡಿ.ಎ.ಆರ್. ಹಾಗೂ ಕೆ.ಎಸ್.ಆರ್.ಪಿ ನಿಯೋಜನೆ ಮಾಡಲಾಗಿದೆ.