ಹಿಜಾಬ್ ಧರಿಸುವುದಾದರೆ ಮದ್ರಸಕ್ಕೆ ಹೋಗಿ, ಕಾಲೇಜಿಗಲ್ಲ: ಸಂಸದ ಪ್ರತಾಪ್ ಸಿಂಹ

ಮಡಿಕೇರಿ ಫೆ.5: ನೀವು ಹಿಜಾಬ್ ಹಾಕಿಕೊಂಡಾದರು ಹೋಗಿ, ಬುರ್ಖಾ ಹಾಕಿಕೊಂಡಾದರು ಹೋಗಿ, ಪರದೆ ಅಕಾರದ ಟೋಪಿ ಬೇಕಾದರೂ ಹಾಕಿಕೊಂಡಾದರು ಹೋಗಿ ಅಥವಾ ಮೊಣಕಾಲು ಕಾಣುವಂತಹ ಜುಬ್ಬಾ ಪೈಜಾಬ ಹಾಕಿಕೊಂಡಾದರು ಹೋಗಿ. ಆದರೆ ನೀವು ಹೋಗಬೇಕಾದ ಸ್ಥಳ ಶಾಲಾ ಕಾಲೇಜಲ್ಲ, ಮದ್ರಸ ಎಂದು ಕೊಡಗು, ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಿ ಅಥವಾ ಖಾಸಗಿ ಶಾಲಾ, ಕಾಲೇಜುಗಳಲ್ಲಿ ಶಿಕ್ಷಣ ವ್ಯವಸ್ಥೆಯಡಿ ಸಮವಸ್ತ್ರ ಇದೆ, ಅದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು. ನಿಮ್ಮ ಮನಸೋ ಇಚ್ಛೆ ಇರ್ತೀನಿ ಅಂದ್ರೆ ಅದಕ್ಕೆ ಮದ್ರಸ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಶರೀಅತೇ ಮುಖ್ಯ, ನಮ್ಮ ಧರ್ಮನೇ ಮುಖ್ಯ ಅನ್ನೋದಾದ್ರೆ 1947 ರಲ್ಲೇ ನಿಮಗೆ ಪ್ರತ್ಯೇಕ ದೇಶ ನೀಡಿದಾಗ ಅಲ್ಲಿಗೇ ಹೋಗಬಹುದಿತ್ತಲ್ಲ? ಇಲ್ಲಿ ಉಳಿದ ಮೇಲೆ ಈ ದೇಶದ ನೀತಿ ನಿಯಮಗಳನ್ನು ಪಾಲಿಸಿ, ಗೌರವಿಸಬೇಕು. 1947ರಲ್ಲಿ ದೇಶವನ್ನು ವಿಭಜನೆ ಮಾಡಿ ಎರಡು ದೇಶವನ್ನು ನಿಮಗೇ ನೀಡಲಾಗಿತ್ತಲ್ಲ, ಆಗಲೇ ಹೋಗಬೇಕಿತ್ತು. ಯಾಕೆ ಉಳಿದುಕೊಂಡ್ರಿ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಗಣೇಶ, ಸರಸ್ವತಿ ಪೂಜೆ, ಕುಂಕುಮ, ಬಳೆಯ ಬಗ್ಗೆ ಮಾತನಾಡುವವರು ಮೊದಲು ತಿಳಿಯಬೇಕಾಗಿರುವುದು ಇದು ಬ್ರಿಟಿಷರ್ ಇಂಡಿಯಾ ಅಲ್ಲ ಎನ್ನುವುದನ್ನು. ಇದು ಭಾರತ, ಭಾರತದ ಬುನಾದಿಯೇ ಹಿಂದೂ ಧರ್ಮ. ಈ ದೇಶದ ಸಂಸ್ಕೃತಿಯನ್ನು ಪ್ರಶ್ನೆ ಮಾಡುವ ಹಕ್ಕು ನಿಮಗಿಲ್ಲ. ಇಸ್ಲಾಂ ಇರಬಹುದು ಕ್ರಿಶ್ಚಿಯನ್ ಇರಬಹುದು ಮರುಭೂಮಿಯಲ್ಲಿ ಹುಟ್ಟಿ ನೆಲೆಗಾಗಿ ಹುಡುಕಿಕೊಂಡು ಇಲ್ಲಿಗೆ ಬಂದಿವೆ. ಇಲ್ಲಿಗೆ ಬಂದ ಮೇಲೆ ಹಿಂದೂ ಸಂಸ್ಕೃತಿಯನ್ನು ಇಪ್ಪಿಕೊಳ್ಳಬೇಕು. ನಿಮಗೆ ನಮ್ಮನ್ನು ಪ್ರಶ್ನಿಸುವ ಹಕ್ಕನ್ನು ಕೊಟ್ಟಿಲ್ಲ. ಸಂವಿಧಾನದಲ್ಲಿ ಕಲಿಕಾ ಅವಕಾಶ, ಸಮಾನ ಹಕ್ಕು ನಿಮಗೆ ನೀಡಲಾಗಿದೆ, ಆದರೆ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಪ್ರಶ್ನೆ ಮಾಡುವ ಹಕ್ಕನ್ನು ನಿಮಗೆ ನೀಡಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಹಾಗೂ ಮುಡಾ ಅಧ್ಯಕ್ಷ ರಮೇಶ್ ಹೊಳ್ಳ ಉಪಸ್ಥಿತರಿದ್ದರು.