ಮುಂಬೈನಲ್ಲಿ ವಿವಾಹ ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಫಡ್ನವಿಸ್ ಪತ್ನಿ

ಸಾಂದರ್ಭಿಕ ಚಿತ್ರ
ಮುಂಬೈ,ಪೆ.5: ಸಂಚಾರ ದಟ್ಟಣೆಯಿಂದಾಗಿ ಜನರಿಗೆ ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಮತ್ತು ಇದು ಮುಂಬೈನಲ್ಲಿ ಶೇ.3ರಷ್ಟು ವಿವಾಹ ವಿಚ್ಛೇದನಗಳಿಗೆ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ,ಬ್ಯಾಂಕರ್ ಮತ್ತು ಗಾಯಕಿಯೂ ಆಗಿರುವ ಅಮೃತಾ ಫಡ್ನವೀಸ್ ಶನಿವಾರ ಹೇಳಿದ್ದು,ಇದನ್ನು ಶಿವಸೇನೆ ವ್ಯಂಗ್ಯವಾಡಿದೆ.
‘ದಿನದ ಅತ್ಯುತ್ತಮ (ಕು)ತರ್ಕ ಪ್ರಶಸ್ತಿ ಈ ಹೇಳಿಕೆ ನೀಡಿರುವ ಮಹಿಳೆಗೆ ಸಿಗಬೇಕು. ಹಾಗಿದ್ದರೆ ಬೆಂಗಳೂರಿಗರು ಈ ಸುದ್ದಿಯನ್ನು ಓದಬಾರದು. ಈ ಸುದ್ದಿ ಅವರ ವಿವಾಹಗಳಿಗೆ ಮಾರಣಾಂತಿಕವಾಗಬಹುದು ’ ಎಂದು ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಟ್ವೀಟಿಸಿದ್ದಾರೆ.
‘ನಾನೋರ್ವ ಸಾಮಾನ್ಯ ಪ್ರಜೆಯಾಗಿ ಇದನ್ನು ಹೇಳುತ್ತಿದ್ದೇನೆ. ನಾನು ಹೊರಗೆ ಹೋದಾಗೆಲ್ಲ ರಸ್ತೆಗುಂಡಿಗಳು,ಸಂಚಾರ ದಟ್ಟಣೆಯನ್ನು ನೋಡುತ್ತಿದ್ದೇನೆ. ಸಂಚಾರ ದಟ್ಟಣೆಯಿಂದಾಗಿ ಜನರಿಗೆ ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಮತ್ತು ಮುಂಬೈನಲ್ಲಿ ಶೇ.3ರಷ್ಟು ವಿವಾಹ ವಿಚ್ಛೇದನಗಳು ಇದರಿಂದಾಗಿಯೇ ಸಂಭವಿಸುತ್ತಿವೆ ’ಎಂದು ಫಡ್ನವೀಸ್ ಹೇಳಿದರು.
ಇದೊಂದು ಅಚ್ಚರಿಯ ಹೇಳಿಕೆ. ಸಂಚಾರ ದಟ್ಟಣೆಯು ವಿಚ್ಛೇದನಕ್ಕೆ ಕಾರಣವಾಗುತ್ತದೆ ಎಂಬ ತರ್ಕವನ್ನು ತಾನೆಂದೂ ಕೇಳಿಲ್ಲ. ವಿಚ್ಛೇದನಕ್ಕೆ ಹಲವಾರು ಕಾರಣಗಳಿರಬಹುದು, ಆದರೆ ಇಂತಹ ಕಾರಣವನ್ನು ಮೊದಲ ಬಾರಿಗೆ ಕೇಳುತ್ತಿದ್ದೇನೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಸಮಸ್ಯೆಗಳ ಕುರಿತು ಫಡ್ನವೀಸ್ ಶಿವಸೇನೆ ನೇತೃತ್ವದ ರಾಜ್ಯ ಸರಕಾರವನ್ನು ಟೀಕಿಸಿರುವುದು ಇದೇ ಮೊದಲ ಸಲವೇನಲ್ಲ. ಟ್ವಿಟರ್ನಲ್ಲಿ ಅವರು ನಿಯಮಿತವಾಗಿ ಹಲವಾರು ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುತ್ತಲೇ ಇರುತ್ತಾರೆ. ಅಂದ ಹಾಗೆ,ಫಡ್ನವೀಸ್ ಮತ್ತು ಚತುರ್ವೇದಿ ನಡುವೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ಶೀತಲ ಸಮರ ನಡೆಯುತ್ತಲೇ ಇರುತ್ತದೆ.
#WATCH: BJP leader Devendra Fadnavis' wife Amruta Fadnavis says, "I'm saying this as common citizen. Once I go out I see several issues incl potholes,traffic. Due to traffic,people are unable to give time to their families & 3% divorces in Mumbai are happening due to it." (04.02) pic.twitter.com/p5Nne5gaV5
— ANI (@ANI) February 5, 2022







