ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಒತ್ತಾಯ; ವಿದ್ಯಾರ್ಥಿನಿಯರು, ಪೋಷಕರಿಂದ ಮನವಿ

ಕುಂದಾಪುರ, ಫೆ.5: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಹಿನ್ನೆಲೆ ಯಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು, ಪೋಷಕರು ಹಾಗೂ ಧಾರ್ಮಿಕ ಮುಖಂಡರು ಕುಂದಾಪುರದ ಭಂಡಾರ್ ಕರ್ಸ್ ಹಾಗೂ ಆರ್.ಎನ್.ಶೆಟ್ಟಿ ಮತ್ತು ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಂಶುಪಾಲರನ್ನು ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.
ಹಿಂದಿನಂತೆ ಶಿರವಸ್ತ್ರದೊಂದಿಗೆ ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡುವಂತೆ ಒತ್ತಾಯಿಸಿ ಭಂಡಾರ್‌ಕರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಆರ್.ಎನ್.ಶೆಟ್ಟಿ ಕಾಲೇಜಿನ ಪ್ರಾಂಶುಪಾಲ ನವೀನ್ ಕೆ.ಶೆಟ್ಟಿ ಹಾಗೂ ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ. ಉಮೇಶ್ ಶೆಟ್ಟಿ ಅವರಿಗೆ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದರು.
ನಾವು ತಮ್ಮ ಕಾಲೇಜುಗಳಲ್ಲಿ ಆರಂಭದ ದಿನದಿಂದಲೂ ಶಿರವಸ್ತ್ರದೊಂದಿಗೆ ತರಗತಿಯಲ್ಲಿ ಕುಳಿತು ಶಿಕ್ಷಣ ಪಡೆಯುತ್ತಿದ್ದೇವೆ. ಇತ್ತೀಚೆಗೆ ಕೆಲವು ಬಾಹ್ಯ ಶಕ್ತಿಗಳ ಷಡ್ಯಂತರದಿಂದ ಸೌಹಾರ್ದಯುತವಾಗಿ ಶಿಕ್ಷಣ ಪಡೆಯುತ್ತಿದ್ದ ವಾತಾವರಣ ವನ್ನು ಕೆಡೆಸಿ ಶಿರವಸ್ತ್ರದ ಕುರಿತು ತಗಾದೆ ಎತ್ತುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮಗೆ ಮುಂದಿನ ದಿನಗಳಲ್ಲಿ ನಮ್ಮ ಸಂವಿಧಾನ ಬದ್ಧವಾದ ಹಕ್ಕು ಆಗಿರುವ ಶಿರವಸ್ತ್ರ ಧರಿಸಿ ತರಗತಿಯಲ್ಲಿ ಕೂರಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿ ಯರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪೋಷಕರು, ‘ಈ ಹಿಂದಿ ನಂತೆ ಮಕ್ಕಳಿಗೆ ಶಿರವಸ್ತ್ರ ಧರಿಸಿ ತರಗತಿ ಬರಲು ಅವಕಾಶ ಕೊಡುವಂತೆ ಪ್ರಾಂಶುಪಾಲರಲ್ಲಿ ಮನವಿ ಮಾಡಿದ್ದೇವೆ. ಅದಕ್ಕೆ ಅವರು ಆಡಳಿತ ಮಂಡಳಿ ಜೊತೆ ಮಾತುಕತೆ ಮಾಡಿ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಪೋಷಕರನ್ನು ಕೂಡ ಕರೆದು ಚರ್ಚಿಸಿ ಆದಷ್ಟು ಶೀಘ್ರವೇ ಈ ವಿಚಾರವನ್ನು ಇತ್ಯರ್ಥ ಮಾಡುವುದಾಗಿ ಹೇಳಿದ್ದಾರೆ ಎಂದರು.
‘ನಾವು ಹಿಂದಿನಿಂದಲೂ ಹಿಜಾಬ್ ಧರಿಸಿಕೊಂಡು ಬರುತ್ತಿದ್ದೇವೆ. ನಮ್ಮ ಧಾರ್ಮಿಕ ಹಕ್ಕು ಪಾಲಿಸಲು ಅವಕಾಶ ಕೊಡಬೇಕು. ಪ್ರಾಂಶುಪಾಲರಿಂದ ಉತ್ತಮ ಫಲಿತಾಂಶ ಬರಬಹುದೆಂಬ ನಿರೀಕ್ಷೆ ಇದೆ. ನಾವು ಕುಂದಾಪುರದಲ್ಲಿ ಹಲವು ವರ್ಷಗಳಿಂದ ಅನ್ಯೋನ್ಯತೆಯಿಂದ ಇದ್ದೇವೆ. ಈ ವಿಚಾರದಲ್ಲಿ ರಾಜಕೀಯ ಸಂಘಟನೆಗಳು ಪ್ರವೇಶ ಮಾಡಬಾರದು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ನಮಗೆ ಮುಖ್ಯ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪೋಷಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ಸೈಯ್ಯದ್ ಯಾಸೀನ್, ಹುಸೇನ್ ಹೈಕಾಡಿ, ಮನ್ಸೂರು ಇಬ್ರಾಹಿಂ, ಶಾಬಾನ್ ಹಂಗಳೂರು, ಬಿಎಸ್‌ಎಫ್ ರಫೀಕ್, ಅಬ್ದುಲ್ ಶಮೀ ಹಳಗೇರಿ, ಅಬ್ದುಲ್ ಸತ್ತಾರ್, ನಾಸೀರ್ ಕುಂದಾಪುರ, ಉದಯ ಕುಮಾರ್ ತಲ್ಲೂರು, ಶಶಿಧರ್ ಹೆಮ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.
‘ಹಿಜಾಬ್ ವಿಚಾರವನ್ನು ಅರ್ಥ ಮಾಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೌಹಾರ್ದ ರೀತಿಯಲ್ಲಿ ಬಗೆಹರಿಸಿ ಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡುತ್ತೇವೆ. ಪ್ರಧಾನಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಘೋಷಿಸಿದ್ದಾರೆ. ಅದರಂತೆ ನಾವು ನಮ್ಮ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳಿಸಿದ್ದೇವೆ. ಆದರೆ ಶಿಕ್ಷಣ ಪಡೆಯುವಲ್ಲಿ ಈ ರೀತಿಯ ಸಮಸ್ಯೆಯನ್ನು ಉದ್ಭವಿಸಲಾಗಿದೆ. ಇದನ್ನು ಸರಕಾರ ಹಾಗೂ ಹೈಕೋರ್ಟ್ ಗಮನದಲ್ಲಿಟ್ಟು ಕೊಂಡು ಸಂವಿಧಾನದಡಿಯಲ್ಲಿ ತೀರ್ಮಾನ ಮಾಡಿಕೊಡಬೇಕು’
-ಸೈಯ್ಯದ್ ಯಾಸೀನ್, ಪೋಷಕರು