ಕುಂದಾಪುರದಲ್ಲಿ ಮುಂದುವರಿದ ಹಿಜಾಬ್ ಗೆ ವಿರೋಧ; ಕೇಸರಿ ಶಾಲು ಧರಿಸಿ ಘೋಷಣೆ ಕೂಗಿದ ವಿದ್ಯಾರ್ಥಿಗಳು!

ಕುಂದಾಪುರ, ಫೆ.5: ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವು ದನ್ನು ವಿರೋಧಿಸಿ ಕುಂದಾಪುರ ನಗರದ ಎರಡು ಖಾಸಗಿ ಕಾಲೇಜುಗಳ ಕೆಲವು ವಿದ್ಯಾರ್ಥಿಗಳು ಇಂದು ಬೆಳಗ್ಗೆ ಕೇಸರಿ ಶಾಲು ಧರಿಸಿ ಘೋಷಣೆಗಳನ್ನು ಕೂಗುತ್ತ ಕಾಲೇಜಿಗೆ ಆಗಮಿಸಿದ ಘಟನೆ ನಡೆದಿದೆ.
ಕುಂದಾಪುರ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಕೆಲವು ವಿದ್ಯಾರ್ಥಿ ಗಳು ಕುಂದೇಶ್ವರ ಬಳಿಯಿಂದ ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದರು. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದರೆ ನಾವು ಕೇಸರಿ ಶಾಲು ಧರಿಸುತ್ತೇವೆ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಜೈ ಶ್ರೀರಾಮ್, ಜೈ ಶಿವಾಜಿ ಎಂಬ ಘೋಷಣೆಗಳನ್ನು ಕೂಗಿದರು.
ಇದೇ ವೇಳೆ ಮುಸ್ಲಿಮ್ ವಿದ್ಯಾರ್ಥಿನಿಯರು, ಹಿಜಾಬ್ ನಮ್ಮ ಹಕ್ಕು, ಅದನ್ನು ಧರಿಸಿಕೊಂಡು ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಬೇಕು ಎಂದು ಕಾಲೇಜಿನ ಎದುರು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಕಾಲೇಜು ಆಡಳಿತ ಮಂಡಳಿ ಜೊತೆ ಚರ್ಚಿಸಿದರು.
ಗೊಂದಲಮಯ ವಾತಾವರಣದ ಹಿನ್ನೆಲೆಯಲ್ಲಿ ಆರ್.ಎನ್.ಶೆಟ್ಟಿ ಕಾಲೇಜಿಗೆ ರಜೆ ಘೋಷಣೆ ಮಾಡಲಾಯಿತು. ಬಳಿಕ ಕೇಸರಿ ಶಾಲು ಧರಿಸಿಕೊಂಡು ವಾಪಾಸ್ಸು ಮೆರವಣಿಗೆ ಮೂಲಕ ನಗರದ ಕಡೆ ಬಂದ ವಿದ್ಯಾರ್ಥಿಗಳನ್ನು ಪೊಲೀಸರು ಚದುರಿಸಿ ಮನೆಗೆ ಕಳುಹಿಸಿದರು.
ಅದೇ ರೀತಿ ಕುಂದಾಪುರದ ಭಂಡಾರ್‌ಕರ್ಸ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೂಡ ಕೇಸರಿ ಶಾಲುಗಳನ್ನು ಧರಿಸಿಕೊಂಡು ಕಾಲೇಜಿಗೆ ಆಗಮಿಸಿದರು. ಆದರೆ ಕೇಸರಿ ಶಾಲು ಧರಿಸಿ ಕಾಲೇಜು ಆವರಣದೊಳಗೆ ಪ್ರವೇಶ ನಿರಾಕರಿಸಿರುವುದರಿಂದ ವಿದ್ಯಾರ್ಥಿಗಳು, ಶಾಲು ತೆಗೆದಿಟ್ಟು ಒಳಗೆ ಬಂದರು.
ಎಲ್ಲ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ತಪಾಸಣೆ ನಡೆಸಿ ಒಳಗೆ ಕಳುಹಿಸಲಾ ಯಿತು. ಸಮಾನ ಸಮವಸ್ತ್ರ ನೀತಿ ಬೇಕು ಎಂದು ಒತ್ತಾಯಿಸಿದ ವಿದ್ಯಾರ್ಥಿ ಗಳು, ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದರೆ ನಾವು ಕೇಸರಿ ಶಾಲು ಧರಿಸು ತ್ತೇವೆ ಎಂದು ಹೇಳಿದರು.
ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.
