ಹಿಜಾಬ್ ವಿವಾದ ಟೂಲ್‌ಕಿಟ್‌ನ ಭಾಗ: ಸಚಿವ ಸುನಿಲ್ ಕುಮಾರ್

ಮಂಗಳೂರು, ಫೆ. 5: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧಾರಣೆ ವಿವಾದದ ಹಿಂದೆ ಹಿಡನ್ ಅಜೆಂಡಾ ಅಡಗಿದೆ. ವಾದದ ಹಿಂದಿರುವುದು ಹಿಜಾಬ್ ಅಲ್ಲ. ವಿವಾದ, ಪಿತೂರಿ ಸೃಷ್ಟಿ ಮಾಡಬೇಕೆಂಬ ಉದ್ದೇಶ. ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿ ಮಾಡಬೇಕೆಂಬ ಟೂಲ್ ಕಿಟ್‌ನ ಭಾಗ ಇದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಇಂದು ಸಂವಾದ ಕಾರ್ಯಕ್ರಮದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದರು.
ಶಾಲೆಗೆ ಶುಲ್ಕ ಕಟ್ಟಲು ತಯಾರಿಲ್ಲದ ಅದೇ ಸಮುದಾಯದವರಿಗೆ ಈಗ ಕೋರ್ಟಿಗೆ ಹೋಗಲು ದುಡ್ಡಿದೆಯೇ? ಶಾಲೆಗೆ ಕಟ್ಟಡ ಕಟ್ಟಲು ಶುಲ್ಕ ಕೊಡಿ ಎಂದರೆ ಅದು ಕೊಡಲು ಆಗುವುದಿಲ್ಲ. ಆದರೆ ಈ ವಿಷಯಕ್ಕೆ ಕೋರ್ಟಿಗೆ ಹೋಗುತ್ತಾರೆ. ಇದಕ್ಕೆ 50 ರಿಂದ 60 ಸಾವಿರ ಜನ ಟ್ವೀಟ್ ಮಾಡುತ್ತಾರೆಂದರೆ ಇದರ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟ ಎಂದವರು ಹೇಳಿದರು.
ಈ ವಿಷಯಕ್ಕೆ ಸಂಬಂಧಿಸಿ ಈಗಾಗಲೇ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ. ಕಾನೂನಿನ ಉಪ ಸಮಿತಿ ಮಾಡಿ ಸಮಿತಿ ನೀಡಿದ ವರದಿ ಮೇಲೆ ಸುತ್ತೋಲೆ ಮಾಡುವುದಾಗಿ ತಿಳಿಸಿದ್ದು, ಸುತ್ತೋಲೆಗೆ ಸುಮಾರು ಒಂದು ವಾರ ಕಾಲಾವಕಾಶ ಬೇಕಾಗಬಹುದು. ಈಗ ಸ್ಥಳೀಯ ಆಡಳಿತ ಮಂಡಳಿಯೇ ತೀರ್ಮಾನ ತೆಗೆದುಕೊಳ್ಳುವಂತೆ ಇಲಾಖೆ ಸೂಚನೆ ನೀಡಿದ್ದು, ಅದನ್ನು ಅವರು ಮಾಡುತ್ತಿದ್ದಾರೆ. ಇದೀಗ ದಿಢೀರ್ ಎಂದು ಈ ಪಿತೂರಿ ಯಾಕೆ ಆರಂಭ ಆಗಿದ್ದು. ಕೆಲ ದಿನಗಳ ಹಿಂದಿನವರೆಗೂ ಹಿಜಾಬ್ ಅಥವಾ ಬುರ್ಖಾ ಧರಿಸಿ ಕಾಲೇಜಿಗೆ ಬರುತ್ತಿದ್ದು, ಬಳಿಕ ತೆಗೆದಿಟ್ಟು ತರಗತಿಗೆ ಹೋಗುತ್ತಿದ್ದರು. ಅಲ್ಲಿಯವರೆಗೂ ಯಾವುದೇ ಸಮಸ್ಯೆ ಇರಲಿಲ್ಲ. ಈಗಲೂ ಹಾಕಿಕೊಂಡು ಬಂದು ತರಗತಿ ಪ್ರವೇಶಿಸುವಾಗ ತೆಗೆದಿಟ್ಟು ಹೋಗಲು ಯಾರದ್ದೂ ವಿರೋಧ ಇಲ್ಲ. ಇದನ್ನು ಉದ್ದೇಶಪೂರ್ವಕವಾಗಿ ಹಠಕ್ಕೆ ಬಿದ್ದಂತೆ ಹಾಕಿಯೇ ಹಾಕುತ್ತೇನೆ ಎಂದರೆ ಆಗುತ್ತದೆಯಾ ? ಯೂನಿಫಾರಂ ಕಾನೂನು ಆಗಿ ಯಾಕೆ ಆಗಬೇಕು. ಅದು ಸಂಪ್ರದಾಯ. ಒಂದೇ ತರ ಕಾಣಬೇಕು. ಶಿಸ್ತು ಇರಬೇಕು ಎಂಬ ಕಾರಣಕ್ಕೆ ಮಾಡಿದ್ದು, ಅದಕ್ಕೆ ಕಾನೂನು ಚೌಕಟ್ಟು ಕೊಡಬೇಕೆಂಬುದರಲ್ಲಿ ಅರ್ಥವೇ ಇಲ್ಲ. ಅದು ಕೊಡಬೇಕೆಂದರೆ ಸರಕಾರ ಅದಕ್ಕೂ ಸಿದ್ಧವಿದೆ. ಅದು ಬಿಟ್ಟು ನಾನು ಹೇಗೆ ಬೇಕಾದರೂ ಬರುತ್ತೇನೆ ಎಂಬುದಕ್ಕೆ ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ.
ಹಿಂದೆ ತರಗತಿಯಲ್ಲಿ ಹಿಜಾಬ್ ಹಾಕಿಕೊಂಡು ಕುಳಿತಿರುವ ಉದಾಹರಣೆ ಇದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಆ ರೀತಿ ಕೂತಿರುವುದೂ ತಪ್ಪೇ. ಹಿಂದೆ ಸುಮ್ಮನೆ ವಿವಾದ ಯಾಕೆ ಎಂದು ಆಡಳಿತ ಮಂಡಳಿ ಸುಮ್ಮನೆ ಇದ್ದಿರಬಹುದು. ಈಗ ಇದ್ದಕ್ಕಿದ್ದಂತೆ ವಿವಾದ ಮಾಡುವುದೆಂದರೆ ಏನರ್ಥ. ಸರಕಾರ ತನ್ನ ಜವಾಬ್ದಾರಿ ನಿರ್ವಹಿಸಲಿದೆ. ಈ ಬಗ್ಗೆ ಕಾನೂನು ರೂಪಿಸಲಿದೆ. ವ್ಯಕ್ತಿ ಸ್ವಾತಂತ್ರದ ಬಗ್ಗೆ ಮಾತನಾಡುವವರು ಮಸೀದಿಯೊಳಗೂ ಮಹಿಳೆಯರಿಗೆ ಪ್ರವೇಶ ನೀಡಲಿ. ತ್ರಿಬಲ್ ತಲಾಕ್ ತೆಗೆದು ಮುಸ್ಲಿಂ ಮಹಿಳೆಯರಿಗೆ ಭದ್ರತೆ ನೀಡಿದ್ದು ಬಿಜೆಪಿ ಸರಕಾರ ಎಂದವರು ಹೇಳಿದರು.
ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುವ ಬಗ್ಗೆ ಪೋಷಕರು, ವಿವಾದ ಮಾಡುವವರು ಅರ್ಥ ಮಾಡಿಕೊಳ್ಳಬೇಕು. ಹಿಜಾಬ್‌ಗೆ ಪ್ರತಿಕ್ರಿಯೆಯಾಗಿ ಕೇಸರಿ ಶಾಲು ಪ್ರಕರಣ ಆಗಿದೆ. ದಿಢೀರ್ ಆಗಿ ಆರಂಭ ಆಗಿದ್ದಲ್ಲ. ಪ್ರಾಂಶುಪಾಲರ ನಡೆಯನ್ನು ನಾನು ಸಮರ್ಥಿಸುತ್ತೇನೆ. ಶಾಲೆಗಳಲ್ಲಿ ಶಿಸ್ತು ಅಗತ್ಯ. ಈವರೆಗೆ ಅಂತಹ ಶಿಸ್ತು ಇಲ್ಲವೆಂದಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲೂ ಪ್ರಾಂಶುಪಾಲರು ಈ ಕೆಲಸ ಮಾಡಬೇಕು.
ಶಾಲೆಗಳಲ್ಲಿ ನಡೆಯುವ ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಯಾಕೆ ಎಂಬ ಪ್ರಶ್ನೆಗೆ, ಇದನ್ನು ವಿವಾದ ಮಾಡಬೇಕಾದ ಅಗತ್ಯವೇ ಇಲ್ಲ. ನಾವು ಶಾಲೆಗೆ ಹೋಗುತ್ತಿದ್ದಾಗ ವಸ್ತ್ರ ಸಂಹಿತೆ ಜಾರಿಯಲ್ಲಿತ್ತು. ಈಗ ಯಾಕೆ ಸಮಸ್ಯೆ. ಈ ರಾಷ್ಟ್ರವನ್ನು ಹಿಂದೂರಾಷ್ಟ್ರ ಎಂದು ಕರೆಯುತ್ತಾರೆ. ಇದನ್ನು ತಾಲಿಬಾನ್, ಅಪ್ಘಾನಿಸ್ತಾನ ಮಾಡಲು ಸಾಧ್ಯವಿಲ್ಲ. ಬೇರೆ ದೇಶಗಳಲ್ಲಿ ಬುರ್ಖಾವನ್ನೇ ನಿಷೇಧ ಮಾಡಿದ್ದಾರೆ. ಅಲ್ಲಿ ಮಾತನಾಡಲು ಹೋಗದವರು ಇಲ್ಲಿ ಮಾತನಾಡುತ್ತಾರೆ. ಈ ದೇಶದ ಮಣ್ಣಿಗೆ ಗೌರವ ಕೊಡಬೇಕು ಎಂದು ಅವರು ಹೇಳಿದರು.







