`ಹಿಜಾಬ್' ಸರಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಬಹುದು ಎಂದು ಬಿಜೆಪಿ ತೋರಿಸಿದೆ: ಕಾಂಗ್ರೆಸ್ ಟೀಕೆ

ಬೆಂಗಳೂರು, ಫೆ. 5: `ಹಿಜಾಬ್'ನಲ್ಲಿ ಮುಖ ಮುಚ್ಚಿಕೊಳ್ಳುವುದಷ್ಟೇ ಅಲ್ಲ, ಸರಕಾರವೊಂದರ ವೈಫಲ್ಯಗಳನ್ನೂ ಮುಚ್ಚಿಕೊಳ್ಳಬಹುದು ಎಂದು ಬಿಜೆಪಿ ತೋರಿಸಿಕೊಡುತ್ತಿದೆ! ವಿಷಯವಲ್ಲದ ವಿಷಯವನ್ನು ವಿವಾದವನ್ನಾಗಿಸಿ ರಾಜ್ಯದಲ್ಲಿ ಕೋಮು ಕೇಂದ್ರಿತ ವಿಚಾರಗಳನ್ನು ಸದಾ ಚರ್ಚೆಯಲ್ಲಿಡಲು ಹವಣಿಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ರಾಜ್ಯದ ಮಾನ ಇನ್ನೆಷ್ಟು ತೆಗೆಯಬೇಕೆಂದಿದ್ದೀರಿ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಬಡವರಿಗಾಗಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರದ ಯಶಸ್ವಿ ಯೋಜನೆ `ಇಂದಿರಾ ಕ್ಯಾಂಟೀನ್' ದೇಶಾದ್ಯಂತ ತನ್ನ ಗುಣಮಟ್ಟದಿಂದಾಗಿ ಜನಪ್ರಿಯತೆ ಗಳಿಸಿತ್ತು. ಹೊಸ ಯೋಜನೆ ಜಾರಿಗೊಳಿಸುವ ಯೋಗ್ಯತೆ ಇಲ್ಲದ ಜನವಿರೋಧಿ ಬಿಜೆಪಿ ಸರಕಾರಕ್ಕೆ ಈ ಯೋಜನೆಯನ್ನ ನಿರ್ವಹಿಸಿಕೊಂಡು ಹೋಗಲೂ ಅರ್ಹತೆ ಇಲ್ಲದಾಗಿದೆ' ಎಂದು ಟೀಕಿಸಿದೆ.
`ಯಾವುದೇ ವಸತಿ ಯೋಜನೆಯಲ್ಲಿಯೂ ಮನೆಗಳನ್ನು ಮಂಜೂರು ಮಾಡದೆ ಕಾಲ ಕಳೆದ ವಸತಿ ಸಚಿವರ ಗಮನ ಏನಿದ್ದರೂ ಬೆಂಗಳೂರು ಉಸ್ತುವಾರಿಗಾಗಿ ಪೈಪೋಟಿ ನಡೆಸುವುದರ ಕಡೆಗಿತ್ತು. ಹಿಂದಿನ ನಮ್ಮ ಸರಕಾರದಲ್ಲಿ ಮಂಜೂರಾದ ಮನೆಗಳಿಗೂ ಹಣ ನೀಡದೆ ಕೇವಲ ಸುಳ್ಳು ಲೆಕ್ಕ ಕೊಡುತ್ತ ತಿರುಗುವುದನ್ನೇ ಸಾಧನೆ ಎಂದು ತಿಳಿದಿದ್ದಾರೆ ವಸತಿ ಸಚಿವರು' ಎಂದು ಕಾಂಗ್ರೆಸ್, ಸಚಿವ ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದೆ.
'ಹಿಜಾಬ್'ನಲ್ಲಿ ಮುಖ ಮುಚ್ಚಿಕೊಳ್ಳುವುದಷ್ಟೇ ಅಲ್ಲ, ಸರ್ಕಾರವೊಂದರ ವೈಫಲ್ಯಗಳನ್ನೂ ಮುಚ್ಚಿಕೊಳ್ಳಬಹುದು ಎಂದು ಬಿಜೆಪಿ ತೋರಿಸಿಕೊಡುತ್ತಿದೆ!
— Karnataka Congress (@INCKarnataka) February 5, 2022
ವಿಷಯವಲ್ಲದ ವಿಷಯವನ್ನು ವಿವಾದವನ್ನಾಗಿಸಿ ರಾಜ್ಯದಲ್ಲಿ ಕೋಮು ಕೇಂದ್ರಿತ ವಿಚಾರಗಳನ್ನು ಸದಾ ಚರ್ಚೆಯಲ್ಲಿಡಲು ಹವಣಿಸುತ್ತಿದೆ.@BSBommaiಅವರೇ, ರಾಜ್ಯದ ಮಾನ ಇನ್ನೆಷ್ಟು ತೆಗೆಯಬೇಕೆಂದಿದ್ದೀರಿ? pic.twitter.com/eonvRYLsCW







