ರಾಜಕೀಯಕ್ಕೆ ಮಕ್ಕಳ ಬಳಕೆ ಅಕ್ಷಮ್ಯ: ಶಬ್ಬೀರ್ ಉಡುಪಿ
ಉಡುಪಿ, ಫೆ.5: ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್‌ನ ಪಾತ್ರ ಏನು ಇಲ್ಲ. ಕಾಂಗ್ರೆಸ್ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಸೌಹಾರ್ದವಾಗಿ ಸಮಸ್ಯೆ ಬಗೆ ಹರಿಸುವಂತೆ ಹಲವು ಬಾರಿ ಶಾಲಾಡಳಿತಕ್ಕೆ ಮತ್ತು ಸರಕಾರಕ್ಕೆ ಮನವಿ ಮಾಡಿದೆ. ರಾಜಕೀಯಕ್ಕೆ ಮಕ್ಕಳನ್ನು ಬಳಸಿಕೊಳ್ಳುವುದು ಅಕ್ಷಮ್ಯ ಎಂದು ಕಾಂಗ್ರೆಸ್ ಮುಖಂಡ ಶಬ್ಬೀರ್ ಅಹ್ಮದ್ ಉಡುಪಿ ತಿಳಿಸಿದ್ದಾರೆ.
ಕಾಂಗ್ರೆಸ್ ಎಂದಿಗೂ ವಿದ್ಯಾರ್ಥಿಗಳ ಶಿಕ್ಷಣದ ಪರವಾಗಿ ಮಾತ್ರ ಇರುತ್ತದೆ. ಹಿಜಾಬ್ ವಿವಾದದ ಹೆಸರಿನಲ್ಲಿ ಮಕ್ಕಳ ಅಮೂಲ್ಯ ಸಮಯವನ್ನು ಹಾಳು ಮಾಡಲಾಗುತ್ತಿದೆ. ಕಾಣದ ಕೈಗಳು ಈಗಾಗಲೇ ರಂಗಸ್ಥಳಕ್ಕೆ ಧುಮುಕಿದೆ. ರಾಜಕೀಯ ಲಾಭನಷ್ಟದ ಅಂದಾಜು ಮಾಡಲ್ಪಟ್ಟಿದೆ. ಮಕ್ಕಳು ಹಿಂದಿನಿಂದಲೂ ಹಿಜಾಬ್ ಧರಿಸಿಯೇ ತರಗತಿಗಳಿಗೆ ಹಾಜರಾಗುತ್ತಿದ್ದರು. ಆಗ ಇಲ್ಲದ ವಿವಾದ ಏಕಾಏಕಿ ಈಗ ಮಕ್ಕಳ ಮೇಲೆ ಯಾಕೆ ಹೊರಿಸಲಾಯಿತು ಎಂದು ಅವರು ಪ್ರಶ್ನಿಸಿದ್ದಾರೆ.
ಮಕ್ಕಳ ಭವಿಷ್ಯದ ಕಡೆಗೆ ನೋಡಿ ಈ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಈ ಹಿಂದೆ ಇದ್ದ ಹಾಗೆಯೇ ವಿದ್ಯಾಭ್ಯಾಸ ಮುಂದುವರೆಸಲು ಅನುವು ಮಾಡಿ ಕೊಡುವುದು ಉತ್ತಮ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕು. ಜಿಲ್ಲಾಧಿಕಾರಿ ಇತ್ತ ಗಮನ ಹರಿಸಿದಲ್ಲಿ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.





