ಆರೆಸೆಸ್ಸ್ ಮುಖಂಡರ ಇಚ್ಛೆಯಂತೆ ವಾರ್ಡ್ ಮರುವಿಂಗಡನೆ: ರಾಮಲಿಂಗಾರೆಡ್ಡಿ ಆರೋಪ
ಬಿಬಿಎಂಪಿ ಕೇಂದ್ರ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು, ಫೆ.5: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡುಗಳ ಸಂಖ್ಯೆಯನ್ನು 198ಕ್ಕೆ ಹೆಚ್ಚಿಸಿ ಮರುವಿಂಗಡನೆ ಆದದ್ದು 2009ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ. ಆದರೆ, ಬಿಜೆಪಿಯವರು ಅನಗತ್ಯವಾಗಿ ಈ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಅವರು ನಿಸ್ಸೀಮರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಕಿಡಿಗಾರಿದರು.
ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಬಿಬಿಎಂಪಿ ವಾರ್ಡುಗಳ ಅವೈಜ್ಞಾನಿಕ ಮರು ವಿಂಗಡನೆ ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ವಿಫಲವಾಗಿರುವುದನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಅಧಿಕಾರಿಗಳು ಮಾಡಬೇಕಾದ ಮರುವಿಂಗಡಣೆಯನ್ನು ಬಿಜೆಪಿ ಶಾಸಕರು, ಸಂಸದರ ಕಚೇರಿಯಲ್ಲಿ ಆರೆಸೆಸ್ಸ್ ಮುಖಂಡರು ತಮಗೆ ಬೇಕಾದ ರೀತಿಯಲ್ಲಿ ಮಾಡುತ್ತಿದ್ದಾರೆ. ನಾವು ವಾರ್ಡುಗಳ ಮರುವಿಂಗಡಣೆಯಲ್ಲಿ ಯಾವಾಗ ತಪ್ಪಾಗಿ ಮಾಡಿದ್ದೇವೆ ಎಂದು ಹೇಳಲಿ. ನಮ್ಮ ಜತೆ ಚರ್ಚೆಗೆ ಬರಲಿ ಎಂದು ರಾಮಲಿಂಗಾರೆಡ್ಡಿ ಸವಾಲು ಹಾಕಿದರು.
ಕಾಂಗ್ರೆಸ್ ಗೆಲ್ಲಬಾರದು, ಎಲ್ಲ ಕ್ಷೇತ್ರಗಳಲ್ಲೂ ಅವರೇ ಗೆಲ್ಲುವಂತೆ ಮರುವಿಂಗಡಣೆ ಮಾಡುತ್ತಿದ್ದು, ಇದನ್ನು ಸಮಿತಿ ಸರಿಪಡಿಸಬೇಕು. ನಾವು ಈ ವಿಚಾರದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಮನವಿ ಕೊಟ್ಟಿದ್ದೇವೆ. ಅವರು ನ್ಯಾಯಯುತವಾಗಿ ಈ ಪ್ರಕ್ರಿಯೆ ಮಾಡಬೇಕು. ಇದನ್ನು ಸರಿಯಾಗಿ ಮಾಡದಿದ್ದರೆ ನಾವು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇವೆ, ನಂತರ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಅವರು ಹೇಳಿದರು.
ಬೆಂಗಳೂರು ಇವರ ಆಸ್ತಿಯಲ್ಲ. ವೈಜ್ಞಾನಿಕ ರೀತಿಯಲ್ಲಿ ಮರುವಿಂಗಡಣೆ ಮಾಡಲಿ. ಜನ ಯಾರನ್ನು ಇಷ್ಟಪಡುತ್ತಾರೋ ಅವರನ್ನು ಆಯ್ಕೆ ಮಾಡುತ್ತಾರೆ. ಈ ರೀತಿ ವಾಮಮಾರ್ಗದಲ್ಲಿ ಅಧಿಕಾರದಲ್ಲಿ ಬರಲು ಪ್ರಯತ್ನಿಸಬಾರದು. ಅವರಿಗೆ ಚುನಾವಣೆ ನ್ಯಾಯಯುತವಾಗಿ ಎದುರಿಸಲು ಸಾಧ್ಯವಾಗದಿದ್ದರೆ, ತಮಗೆ ಬೇಕಾದವರನ್ನೇ ನಾಮನಿರ್ದೇಶನ ಮಾಡಿಕೊಳ್ಳಲಿ. ಇವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಹೀಗಾಗಿ ತಮಗೆ ಬೇಕಾದವರನ್ನೇ ಆಯ್ಕೆ ಮಾಡಿಕೊಳ್ಳಲಿ ಈ ರೀತಿ ಕಚಡಾ ಕೆಲಸ ಮಾಡುವುದು ಬೇಡ ಎಂದು ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಬಿಬಿಎಂಪಿ ಆಯುಕ್ತರ ಬಳಿ ಸಣ್ಣ ದಾಖಲೆಯೂ ಇಲ್ಲ. ಬಿಜೆಪಿಯವರು ಕೊಟ್ಟ ಕರಡನ್ನೇ ನಂತರ ಅಧಿಕಾರಿಗಳು ನೀಡುತ್ತಾರೆ. ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು, ನಿಮ್ಮ ಮೇಲೆ ಗೌರವವಿದೆ, ನೀವು ಬಿಜೆಪಿ ಹೇಳಿದಂತೆ ಕೇಳಬಾರದು ಎಂದು ಮನವಿ ಮಾಡುತ್ತೇವೆ. 198 ವಾರ್ಡ್‍ಗಳ ಬದಲು 243 ವಾರ್ಡ್ ಮಾಡುತ್ತೇವೆ, ಬೆಂಗಳೂರಿಗೆ ವಿಶೇಷ ಕಾಯ್ದೆ ತರುತ್ತೇವೆ ಎಂದಾಗ ಬೆಂಗಳೂರಿಗೆ ಒಳ್ಳೆಯದಾಗುತ್ತದೆ ಎಂದು ಎಲ್ಲರೂ ಸಹಕಾರ ನೀಡಿದ್ದೆವು. ಅವರು ಕೇವಲ ಆರು ತಿಂಗಳು ಸಮಯ ಕೇಳಿದ್ದರು. ಆದರೆ ಈಗ ಒಂದೂವರೆ ವರ್ಷವಾಗಿದೆ ಎಂದು ಅವರು ಹೇಳಿದರು.
ಈ ವರ್ಷ ರಸ್ತೆಗುಂಡಿಗಳು ಬಿದ್ದಷ್ಟು ಬೆಂಗಳೂರಿನ ಇತಿಹಾಸದಲ್ಲೇ ಬಿದ್ದಿರಲಿಲ್ಲ. ಲಕ್ಷಾಂತರ ಗುಂಡಿಗಳು ಬಿದ್ದಿದ್ದು, ಒಂಭತ್ತು ಜನ ಸತ್ತಿದ್ದಾರೆ. ಬೆಂಗಳೂರಿನಲ್ಲಿ 7 ಜನ ಮಂತ್ರಿಗಳಿದ್ದಾರೆ. ಒಬ್ಬರು ಬಿಡಿಎ ಅಧ್ಯಕ್ಷ, ಮತ್ತೊಬ್ಬರು ಮುಖ್ಯ ಸಚೇತಕ. ಹೀಗಾಗಿ ಒಂಭತ್ತು ಬಿಜೆಪಿ ನಾಯಕರು ಪ್ರಮುಖ ಹುದ್ದೆಯಲ್ಲಿದ್ದಾರೆ. ಮುಖ್ಯಮಂತ್ರಿ ಬೆಂಗಳೂರು ಜಿಲ್ಲಾ ಉಸ್ತುವಾರಿ ಹೊತ್ತಿದ್ದಾರೆ. ರಸ್ತೆಗುಂಡಿಗಳನ್ನು ಮುಚ್ಚಿಸಲು ಕೂತಲ್ಲೇ ಕೆಲಸ ಮಾಡಿಸುವ ಶಕ್ತಿ ಇರಬೇಕು ಎಂದು ಅವರು ಹೇಳಿದರು.
ಪಾಲಿಕೆಯ 2020-21ರ ಬಜೆಟ್‍ನಲ್ಲಿ 198 ವಾರ್ಡ್‍ಗಳಿಗೆ ಒಂದು ಪೈಸೆ ಅನುದಾನ ನೀಡಲಿಲ್ಲ. 2021-22ರ ಬಜೆಟ್‍ನಲ್ಲಿ ಪ್ರತಿ ವಾರ್ಡ್‍ಗೆ ಕೇವಲ 60 ಲಕ್ಷ ಅನುದಾನ ಘೋಷಣೆ ಮಾಡಿತು. ಅದು ಇನ್ನು ಬಿಡುಗಡೆ ಆಗಿಲ್ಲ. ಅದು ಕನ್ನಡಿಯೊಳಗಿನ ಗಂಟಿನಂತೆ ಕೇವಲ ಕಾಣಿಸುತ್ತದೆ. ಆದರೆ ಕೈಗೆ ಸಿಗುವುದಿಲ್ಲ. ಅದರಲ್ಲಿ 20 ಲಕ್ಷ ರಸ್ತೆಗುಂಡಿ ಮುಚ್ಚಲು, 20 ಲಕ್ಷ ಶೀಲ್ಟ್ ಅಂಡ್ ಟ್ರ್ಯಾಕ್ಟರ್, 20 ಲಕ್ಷ ಕೊಳವೆ ಬಾವಿ ನಿರ್ವಹಣೆಗೆ ಎಂದಿದೆ. ಎರಡು ವರ್ಷಗಳಲ್ಲಿ ಪಾಲಿಕೆಯಿಂದ ವಾರ್ಡ್‍ಗಳಿಗೆ ಒಂದು ರೂಪಾಯಿ ಅನುದಾನವೂ ಬಂದಿಲ್ಲ ಎಂದು ರಾಮಲಿಂಗಾರೆಡ್ಡಿ ದೂರಿದರು.
ಪ್ರತಿಭಟನೆಯಲ್ಲಿ ಶಾಸಕರಾದ ಕೃಷ್ಣಬೈರೇಗೌಡ, ಶಾಸಕಿ ಸೌಮ್ಯಾ ರೆಡ್ಡಿ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಮಾಜಿ ಸದಸ್ಯರಾದ ಪಿ.ಆರ್.ರಮೇಶ್, ಎಂ.ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬಿಜೆಪಿ, ಆರೆಸೆಸ್ಸ್‍ನವರದ್ದು ಹಿಡನ್ ಅಜೆಂಡಾ. ಜನಸಾಮಾನ್ಯರಿಗೆ ಇದು ಗೊತ್ತಾಗುವುದಿಲ್ಲ. ಕಾರಣ, ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಲಿಲ್ಲ. ಕರಾವಳಿ ಭಾಗದಲ್ಲಿ ಸರಕಾರದ ವಿರುದ್ಧ ಜನ ನಿಂತರು. ಅದನ್ನು ಸರಿ ಮಾಡಿಕೊಳ್ಳಲು ಹಿಜಾಬ್ ವಿಚಾರ ಎಳೆದು ತಂದಿದ್ದಾರೆ. ಹಿಜಾಬ್ ಈ ಹಿಂದಿನಿಂದಲೂ ಧರಿಸುತ್ತಿದ್ದರು. ಈಗ ಸ್ತಬ್ಧಚಿತ್ರದ ವಿಚಾರದಲ್ಲಿ ಆಗಿರುವ ಡ್ಯಾಮೇಜ್ ನಿಯಂತ್ರಿಸಲು ಈ ವಿವಾದ ತಂದಿದ್ದಾರೆ. ಬಿಜೆಪಿಯ ಹಿಡನ್ ಅಜೆಂಡಾವನ್ನು ಜನ ಅರ್ಥ ಮಾಡಿಕೊಂಡರೆ ಇವರಿಗೆ ಛಿಮಾರಿ ಹಾಕುತ್ತಾರೆ.
ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ







