ಹಿಜಾಬ್ ಧರಿಸಿಯೇ ವಿಧಾನಸಭೆ ಪ್ರವೇಶಿಸುತ್ತೇನೆ, ತಾಕತ್ತಿದ್ದರೆ ತಡೆಯಲಿ: ಶಾಸಕಿ ಕನೀಝ್ ಫಾತಿಮಾ

ಕಲಬುರಗಿ, ಫೆ.5: ನಾನು ಹಿಜಾಬ್ ಧರಿಸಿಯೇ ವಿಧಾನಸಭೆ ಪ್ರವೇಶಿಸುತ್ತೇನೆ. ಯಾರಿಗಾದರೂ ತಾಕತ್ತಿದ್ದರೆ ನನ್ನನ್ನು ತಡೆಯಲಿ ಎಂದು ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಝ್ ಫಾತೀಮಾ ಸವಾಲು ಹಾಕಿದ್ದಾರೆ.
ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಉಡುಪಿ ಜಿಲ್ಲೆಯಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುವುದಕ್ಕೆ ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿ ನ್ಯಾಷನಲ್ ಕಾಲೇಜು, ಅಲ್ ಬದರ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.
ಹಿಜಾಬ್, ಬುರ್ಖಾ ಧರಿಸುವುದು ನಮ್ಮ ಹಕ್ಕು. ಇದರಿಂದ ನಮ್ಮನ್ನು ತಡೆಯಲಾಗದು. ಸಾಂವಿಧಾನಿಕವಾಗಿಯೂ ಇದಕ್ಕೆ ಅವಕಾಶ ಇದೆ. ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಅದಕ್ಕಾಗಿ ಇಂತಹ ವಿಚಾರಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಸಾಧ್ಯವಾದರೆ ನಾನು ಉಡುಪಿಗೆ ಹೋಗಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಬೆಂಬಲ ನೀಡುತ್ತೇನೆ ಎಂದು ಕನೀಝ್ ಫಾತಿಮಾ ಹೇಳಿದರು.
ವಿಧಾನಸಭೆಯಲ್ಲೂ ಈ ಬಗ್ಗೆ ನಾನು ಧ್ವನಿ ಎತ್ತುತ್ತೇನೆ. ಸರಕಾರ ಅದು ಹೇಗೆ ಹಿಜಾಬ್ ನಿಷೇಧ ಮಾಡುತ್ತದೆ ಎಂದು ನಾವು ನೋಡುತ್ತೇವೆ. ಒಂದು ವೇಳೆ ಹಿಜಾಬ್ ನಿಷೇಧಿಸಿದರೆ ಉಗ್ರ ಹೋರಾಟ ರೂಪಿಸುತ್ತೇವೆ. ಹಿಜಾಬ್ ನಮ್ಮ ಧರ್ಮದ ಸಾಂಪ್ರದಾಯಿಕ ಉಡುಪು, ಧರಿಸುವುದು ನಮ್ಮ ಹಕ್ಕು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ ಎಂದು ಅವರು ತಿಳಿಸಿದರು.
'ಹಿಜಾಬ್ ನಮ್ಮ ಹಕ್ಕು. ಇದನ್ನು ಧರಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ'. 'ನಮಗೆ ನ್ಯಾಯ ಕೊಡಿ' ಎಂದು ವಿದ್ಯಾರ್ಥಿನಿಯರು ಘೋಷಣೆಗಳನ್ನು ಕೂಗಿದರು. ಅಲ್ಲದೇ, ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ನೀಡಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಮುಖಂಡರಾದ ಫರಾಝ್ ಉಲ್ ಇಸ್ಲಾಮ್, ಮಝರ್ ಆಲಮ್ ಖಾನ್, ಮಹಾನ ನಗರ ಪಾಲಿಕೆಯ ಸದಸ್ಯರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮಹಿಳಾ ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.







