ಉಡುಪಿ ಜಿಲ್ಲೆ ; ಕೋವಿಡ್ ಗೆ ಇಬ್ಬರು ಮೃತ್ಯು, 202 ಮಂದಿಗೆ ಕೊರೋನ ಸೋಂಕು

ಉಡುಪಿ, ಫೆ.5: ಇಂದು ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ಗೆ ಪಾಸಿಟಿವ್ ಬಂದವರ ಸಂಖ್ಯೆ 202 ಆಗಿದ್ದು, ದಿನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಒಟ್ಟು 460 ಮಂದಿ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡರೆ, ಇನ್ನೂ ಸಕ್ರಿಯರಾಗಿರುವವರ ಸಂಖ್ಯೆ 2168ಕ್ಕೆ ಇಳಿದಿದೆ.
ದಿನದಲ್ಲಿ ಕಾರ್ಕಳದ 49 ವರ್ಷ ಪ್ರಾಯದ ಯುವಕ ಹಾಗೂ ಉಡುಪಿಯ 73 ವರ್ಷ ಪ್ರಾಯದ ವೃದ್ಧರು ಕೋವಿಡ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ ಜ.1ರ ಬಳಿಕ 31 ಹಾಗೂ ಒಟ್ಟಾರೆಯಾಗಿ 522ಕ್ಕೇರಿದೆ. ಕಾರ್ಕಳದ ಯುವಕ ಫೆ.3ರಂದು ತನ್ನ ಮನೆಯಲ್ಲಿ ಮೃತಪಟ್ಟಿದ್ದು, ಬಳಿಕ ಆಸ್ಪತ್ರೆಗೆ ತಂದು ಪರೀಕ್ಷಿಸಿದಾಗ ಕೋವಿಡ್ ಸೋಂಕು ಪತ್ತೆಯಾಗಿತ್ತು. ಕಿಡ್ನಿ ಹಾಗೂ ಇತರ ತೊಂದರೆಯಿಂದ ಬಳಲುತಿದ್ದ ಉಡುಪಿಯ 73ರ ವೃದ್ಧರನ್ನು ಜ್ವರ, ಕೆಮ್ಮು, ಉಸಿರಾಟದ ತೊಂದರೆಗಾಗಿ ಜ.22ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಫೆ.1ರಂದು ಮೃತರಾದರು.
ಇಂದು ಪಾಸಿಟಿವ್ ಬಂದ 202 ಮಂದಿಯಲ್ಲಿ 105 ಮಂದಿ ಪುರುಷರು ಹಾಗೂ 97 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 117 ಮಂದಿ ಉಡುಪಿ ತಾಲೂಕಿಗೆ, 50 ಮಂದಿ ಕುಂದಾಪುರ ಹಾಗೂ 33 ಮಂದಿ ಕಾರ್ಕಳ ತಾಲೂಕಿಗೆ ಸೇರಿದವರು. ಉಳಿದಿಬ್ಬರು ಹೊರಜಿಲ್ಲೆಯವರು. ಪಾಸಿಟಿವ್ ಬಂದವರಲ್ಲಿ 182 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ 114ಕ್ಕಿಳಿದಿದೆ.
ಶುಕ್ರವಾರ 460 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೋನ ದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 15289ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 1950 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 17,340ಕ್ಕೇರಿದೆ.
6067 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 6067 ಮಂದಿ ಕೋವಿಡ್ ನಿಯಂತ್ರಣಕ್ಕಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 624 ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ.60 ವರ್ಷ ಮೇಲಿನ 484 ಮಂದಿ ಬೂಸ್ಟರ್ ಡೋಸ್ ಪಡೆದವರಲ್ಲಿ ಸೇರಿದ್ದಾರೆ. ಇನ್ನು 15-18ವರ್ಷದೊಳಗಿನ 64 ಮಂದಿ ಮೊದಲ ಡೋಸ್ ಹಾಗೂ 3124 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಒಟ್ಟು 426 ಮಂದಿ ಮೊದಲ ಡೋಸ್ ಹಾಗೂ 5017 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.