ಬೆಂಗಳೂರು: "ದೆವ್ವ ಇದೆ" ಎಂದು ಕಥೆ ಹೆಣೆದು ಕಳವಿಗೆ ಯತ್ನಿಸಿದ ಆರೋಪಿಯನ್ನು ಬಂಧಿಸಿದ ಪೊಲೀಸರು

ಸಾಂದರ್ಭಿಕ ಚಿತ್ರ
ಬೆಂಗಳೂರು, ಫೆ.5: ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ಕಳವು ಮಾಡಲು ತೆರಳಿ, ದೆವ್ವ ಇದೆ ಎಂದು ಕತೆ ಕಟ್ಟಿದ ವ್ಯಕ್ತಿಯೋರ್ವನನ್ನು ಇಲ್ಲಿನ ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಗುವನ್ನು ಸಾಯಿಸಿ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಜೈಲಿನಲ್ಲಿರುವ ಹಲ್ಲೆಗೆರೆ ಶಂಕರ್ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಆರೋಪದಡಿ ಭರತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಬಳಿಕ ಮನೆ ಮಾಲಕ ಹಲ್ಲೆಗೆರೆ ಶಂಕರ್ ಜೈಲು ಸೇರಿದ್ದು, ನಾಲ್ಕು ತಿಂಗಳಿನಿಂದ ಈ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ರಾತ್ರಿಯಾದರೆ ಈ ಮನೆ ಮುಂದೆ ಹಾದು ಹೋಗಲು ಅಕ್ಕಪಕ್ಕದವರು ಭಯಪಡುತ್ತಾರೆ. ಅಂತಹುದರಲ್ಲಿ ಏಕಾಏಕಿ ಕಳೆದ ಗುರುವಾರ ಈ ಮನೆಯಲ್ಲಿ ಬೆಳಕು ಕಾಣಿಸಿರುವುದು ಗಮನಿಸಿ ಶಂಕರ್ ಅವರ ಸಂಬಂಧಿಕರಿಗೆ ನೆರೆ ಮನೆ ನಿವಾಸಿ ತಿಳಿಸಿದ್ದಾರೆ.
ಸಂಬಂಧಿಕರು ಯಾರೂ ಬಂದಿರಲು ಸಾಧ್ಯವಿಲ್ಲ. ಮನೆ ಬಳಿ ಹೋಗಿ ನೋಡಿ ಎಂದು ತಿಳಿಸಿದಾಗ, ನೆರೆ ಹೊರೆಯವರು ಮನೆ ಬಳಿ ಹೋಗಿ ನೋಡಿದಾಗ ಕಳವು ಆರೋಪಿ ಭರತ್ ಮನೆ ಸೇರಿಕೊಂಡಿದ್ದಾನೆ. ವ್ಯಕ್ತಿಯ ಬಗ್ಗೆ ಅನುಮಾನಗೊಂಡು ಆತನನ್ನು ಹಿಡಿದು ವಿಚಾರಿಸಿದಾಗ ಕಳ್ಳತನ ಮಾಡಲು ಬಂದಿರುವುದು ಗೊತ್ತಾಗಿದೆ.
ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬ್ಯಾಡರಹಳ್ಳಿ ಠಾಣೆ ಪೊಲೀಸರಿಗೆ ಈತನನ್ನು ಒಪ್ಪಿಸಿದ್ದಾರೆ.







