ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ ನಿಧನ

ಬೆಂಗಳೂರು, ಫೆ.5: ಕನ್ನಡ ಸಿನಿಮಾ ಪತ್ರಿಕೋದ್ಯಮದ ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್(64) ಅನಾರೋಗ್ಯದಿಂದ ಶನಿವಾರ ನಿಧನರಾಗಿದ್ದಾರೆ.
ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದರು. ಸಾಂಸ್ಕøತಿಕ ವಲಯದಲ್ಲಿ ಗುರುತಿಸಿಕೊಂಡಿದ್ದ ಅವರು, ತಮ್ಮ ಫೋಟೋಗ್ರಫಿಯ ಮೂಲಕ ಕನ್ನಡ ಸಿನಿಮಾ ರಂಗದ ಚರಿತ್ರೆಯನ್ನು ದೃಶ್ಯ ಮಾಧ್ಯಮದಲ್ಲಿ ಕಟ್ಟಿ ಕೊಡುತ್ತಿದ್ದರು.
ಸಿನಿಮಾ ದಿಗ್ಗಜರಾದ ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ದರ್ಶನ್, ಸುದೀಪ್ ನಟನೆಯ ಸಾವಿರಾರು ಚಲನ ಚಿತ್ರಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಸಚಿವರ ಸಂತಾಪ: ಹೆಸರಾಂತ ಛಾಯಾಗ್ರಾಹಕ ಡಿ.ಸಿ.ನಾಗೇಶ್ ಅವರ ಅಕಾಲಿಕ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ, ಬೆಂಗಳೂರು ಪ್ರೆಸ್‍ಕ್ಲಬ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದು, ನಾಗೇಶ್ ಅವರ ನಿಧನದಿಂದ ಉಂಟಾಗಿರುವ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೆ ನೀಡಿ, ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.







