ಮಂಗಳೂರು; ಸೈಂಟ್ ಆ್ಯಂಟನಿ ಹೋಲಿ ಕ್ರಾಸ್ ಪ್ರಾರ್ಥನಾ ಕೇಂದ್ರ ನೆಲಸಮ
ಪೊಲೀಸ್ ಠಾಣೆಗೆ ದೂರು

ಮಂಗಳೂರು, ಫೆ.5: ನಗರ ಹೊರವಲಯದ ಕೂಳೂರು ಸಮೀಪದ ಪಂಜಿಮೊಗರು-ಉರುಂದಾಡಿ ಎಂಬಲ್ಲಿ ಸೈಂಟ್ ಆ್ಯಂಟನಿ ಹೋಲಿ ಕ್ರಾಸ್ ಪ್ರಾರ್ಥನಾ ಕೇಂದ್ರವನ್ನು ನೆಲಸಮಗೈದ ಘಟನೆ ಶನಿವಾರ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಸಿಬಿ ಮೂಲಕ ನೆಲಸಮಗೊಳಿಸಿದ ವ್ಯಕ್ತಿಯೊಬ್ಬನ ವಿರುದ್ಧ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
40 ವರ್ಷಗಳ ಹಿಂದೆ ಈ ಪ್ರಾರ್ಥನಾ ಕೇಂದ್ರವನ್ನು ನಿರ್ಮಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯಿಂದ ಡೋರ್ ನಂಬ್ರವನ್ನೂ ಪಡೆಯಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ನಡೆಯುವ ಅಂಗನವಾಡಿ ಕೇಂದ್ರ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಮಧ್ಯೆ ಸ್ಥಳೀಯ ಸತ್ಯ ಕೋಡ್ದಬ್ಬು ಸಮಿತಿಯವರು ಈ ಪ್ರಾರ್ಥನಾ ಕೇಂದ್ರ ಅತಿಕ್ರಮಿಸಲು ಯತ್ನಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಈ ಬಗ್ಗೆ ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಲಾಗಿತ್ತು. ಆ ಬಳಿಕ ತಡೆಯಾಜ್ಞೆ ಸಿಕ್ಕಿದೆ. ಆದಾಗ್ಯೂ ವ್ಯಕ್ತಿಯೊಬ್ಬ ಅಕ್ರಮವಾಗಿ ಪ್ರವೇಶಿಸಿ ಶುಕ್ರವಾರ ಮರಗಳನ್ನು ಕಡಿದು ಹಾಕಿದ್ದರೆ, ಶನಿವಾರ ಜೆಸಿಬಿ ಮೂಲಕ ಪ್ರಾರ್ಥನಾ ಕೇಂದ್ರ ನೆಲಸಮ ಮಾಡಿದ್ದಾರೆ ಎಂದು ಸೈಂಟ್ ಆ್ಯಂಟನಿ ಹಾಲಿ ಕ್ರಾಸ್ ಬಿಲ್ಡಿಂಗ್ ಕಮಿಟಿಯ ಅಧ್ಯಕ್ಷ ಆ್ಯಂಟನಿ ಪ್ರಕಾಶ್ ಲೋಬೋ ತಿಳಿಸಿದ್ದಾರೆ.
ಪ್ರಾರ್ಥನಾ ಕೇಂದ್ರದ ಆವರಣದೊಳಗೆ ನೇಮೋತ್ಸವ ಮಾಡಲು ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಲಾಗಿದೆ. ಹಾಗಾಗಿ ನ್ಯಾಯ ಒದಗಿಸಿಕೊಡಬೇಕು ಮತ್ತು ಪ್ರಾರ್ಥನಾ ಕೇಂದ್ರಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.