ಹಿಜಾಬ್ ವಿವಾದ; ವಿದ್ಯಾರ್ಥಿಗಳಲ್ಲಿ ಸಾಮರಸ್ಯ-ಸಹಬಾಳ್ವೆಗೆ ಯೋಜನೆ ರೂಪಿಸಲು ಮನವಿ
ಮುಖ್ಯಮಂತ್ರಿಗೆ ಪತ್ರ ಬರೆದ ಸಾಮಾಜಿಕ ಹೋರಾಟಗಾರ ದಿನೇಶ್ ಹೆಗ್ಡೆ ಉಳೆಪ್ಪಾಡಿ
ಮಂಗಳೂರು, ಫೆ.5: ಉಡುಪಿ ಜಿಲ್ಲೆಯ ಸರಕಾರಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬರುವುದನ್ನೇ ನೆಪವಾಗಿಸಿಕೊಂಡು ಅವರು ಕಾಲೇಜು ಪ್ರವೇಶಿಸದಂತೆ ತಡೆಯೊಡ್ಡುವ ಪ್ರಕ್ರಿಯೆ ಖಂಡನೀಯ.
ವಿದ್ಯಾರ್ಥಿಗಳಿಗೆ ನೈತಿಕತೆಗಳನ್ನು ಬೋಧಿಸುವ ಪ್ರಾಶುಪಾಲರೇ ಸ್ವತಃ ಶಾಲೆಯಿಂದ ಮಕ್ಕಳನ್ನು ಹೊರಗೆ ದೂಡಿ ಶಾಲೆಯ ಗೇಟ್ ಮುಚ್ಚಿರುವುದು ಅಮಾನವೀಯ ಘಟನೆಯಾಗಿದೆ. ಸಮಸ್ಯೆ ಇಲ್ಲಿಗೆ ಕೊನೆಯಾಗದೆ ರಾಜ್ಯದ ಇತರ ಕಾಲೇಜುಗಳ ಆಡಳಿತ ಮಂಡಳಿಗಳು ಕೂಡ ಹಿಜಾಬ್ ಹಾಕಿಕೊಂಡು ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಾಲೆಯಿಂದ ಹೊರಗೆ ಕಳಿಸಿ ವಿವಾದವನ್ನು ಜೀವಂತವಾಗಿಸಿದೆ. ಹಾಗಾಗಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮಧ್ಯೆ ಸಾಮರಸ್ಯ, ಸಹಬಾಳ್ವೆಗೆ ಯೋಜನೆಗಳನ್ನು ರೂಪಿಸಬೇಕು ಎಂದು ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ದಿನೇಶ್ ಹೆಗ್ಡೆ ಉಳೆಪ್ಪಾಡಿ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಶಾಲೆಗಳಲ್ಲಿ ಎಲ್ಲರೂ ಆಡಳಿತ ಮಂಡಳಿ ನಿಗದಿಪಡಿಸಿದ ಸಮವಸ್ತ್ರವನ್ನೇ ಧರಿಸಿಕೊಂಡು ಬರಬೇಕು ಮತ್ತು ಆಡಳಿತ ಮಂಡಳಿಯ ಆದೇಶವನ್ಮು ಪಾಲಿಸದ ವಿದ್ಯಾರ್ಥಿಗಳು ಶಾಲೆಗೆ ಬರಬಾರದು ಎನ್ನುವುದು ಯಾವ ನ್ಯಾಯ? ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಶಾಸಕರು ಈ ಆಡಳಿತ ಮಂಡಳಿಯಲ್ಲಿರುವ ಕಾರಣ ವಿದ್ಯಾರ್ಥಿಗಳಿಗೆ ನ್ಯಾಯ ಸಿಕ್ಕೀತೇ? ನಿನ್ನೆ ಮೊನ್ನೆಯವರೆಗೆ ತರಗತಿಗಳಲ್ಲಿ ಸ್ನೇಹಿತರಂತೆ, ಸಹೋದರ ಸಹೋದರಿಯರಂತೆ ಕಲಿಯುತ್ತಿದ್ದ ಮಕ್ಕಳು ಪರಸ್ಪರ ವಿರುದ್ಧ ಧಿಕ್ಕಿನಲ್ಲಿ ನಡೆದಾಡುವಂತಾಗಿದೆ. ಇದಕ್ಕೆ ಆಸ್ಪದ ನೀಡದೆ ಸರಕಾರ ಸೂಕ್ತ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ.