ಹಿಜಾಬ್ ವಿವಾದ; ಪ್ರಾಂಶುಪಾಲರಿಂದ ಜನಾಂಗೀಯ ದ್ವೇಷ: ಪ್ರಗತಿ ಪರ ಚಿಂತಕರ ವೇದಿಕೆ ಆರೋಪ
ಮಂಗಳೂರು, ಫೆ.5: ಉಡುಪಿ ಮತ್ತು ಕುಂದಾಪುರ ಸರಕಾರಿ ಜೂನಿಯರ್ ಕಾಲೇಜುಗಳಲ್ಲಿ ಹಿಜಾಬ್ ಪ್ರಕರಣವು ಗಂಭೀರ ಸ್ವರೂಪ ಪಡೆದು ಮತೀಯ ದ್ವೇಷ ಮತ್ತು ವಿಭಜನೆಗೆ ಪ್ರಾಂಶುಪಾಲರುಗಳೇ ಕಾರಣ. ಅವರು ಜನಾಂಗೀಯ ದ್ವೇಷದ ನೇರ ಅಪರಾಧಿಗಳಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಪ್ರಗತಿಪರ ಚಿಂತಕರ ವೇದಿಕೆ ಮಂಗಳೂರು ಇದರ ಅಧ್ಯಕ್ಷ ಡಾ. ಕೃಷ್ಣಪ್ಪ ಕೊಂಚಾಡಿ ಮತ್ತು ಕಾರ್ಯದರ್ಶಿ ಯೋಗೀಶ್ ಕೆ. ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮತೀಯ ಮತ್ತು ಭಾವನಾತ್ಮಕ ವಿಷಯಗಳನ್ನು ರಾಜಕೀಯ ಬಂಡವಾಳ ಮಾಡಿರುವ ಸಂಘ ಪರಿವಾರ ಹಾಗೂ ಬಿಜೆಪಿಯು ರೂಪಿಸಿರುವ ಪೂರ್ವಯೋಜಿತ ಕೃತ್ಯವನ್ನು ಸೋಲಿಸಬೇಕಾಗಿದೆ. ಜಾತ್ಯತೀತ, ಸಂವಿಧಾನ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದ್ದ ಪ್ರಾಂಶುಪಾಲರುಗಳೇ ಸ್ವತಃ ಅಮಾನೀಯ ಮೌಲ್ಯಗಳನ್ನು ಎತ್ತಿ ಹಿಡಿದು ಖಳನಾಯಕರಂತಾಗಿದ್ದಾರೆ. ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿ ಸಮುದಾಯದ ವಿದ್ಯಾರ್ಥಿನಿಯರನ್ನು ಸ್ವಾಗತಿಸಬೇಕಿದ್ದ ಕಾಲೇಜಿನ ಪ್ರಾಂಶುಪಾಲರು ಗೇಟ್‌ನಲ್ಲಿ ದ್ವಾರಪಾಲಕರಂತೆ ನಿಂತು ಕಾದಾಟ ನಡೆಸಿರುವುದನ್ನು ಖಂಡಿಸಲು ಪದಗಳೇ ಇಲ್ಲದಾಗಿದೆ. ಕಾಲೇಜಿನ ಪ್ರಾಂಶುಪಾಲ, ಸ್ಥಳೀಯ ಶಾಸಕರು ಕಾನೂನು ಮತ್ತು ಅಧಿಕಾರದ ವ್ಯಾಪ್ತಿ ಮೀರಿ ಬಲವಂತದ ಹೇರಿಕೆ ವತ್ತು ಬಲ ಪ್ರಯೋಗ ನಡೆಸಿರುವುದು ಖಂಡನೀಯ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.