1000 ಕೋಟಿ ರೂ. ವೆಚ್ಚದಲ್ಲಿ 216 ಅಡಿ ಎತ್ತರದ ರಾಮಾನುಜಾಚಾರ್ಯ ಪ್ರತಿಮೆಯನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಹೈದರಾಬಾದ್: ರಾಮಾನುಜಾಚಾರ್ಯರನ್ನು ಗೌರವಿಸುವ ಸಲುವಾಗಿ 1000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಅವರ 216 ಅಡಿ ಎತ್ತರದ 'ಸಮಾನತೆಯ ಪ್ರತಿಮೆ'ಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದ್ದಾರೆ.
ರಾಮಾನುಜಾಚಾರ್ಯ ಅವರ ಈ ಪ್ರತಿಮೆ ಅವರ ಜ್ಞಾನ, ನಿರ್ಲಿಪ್ತತೆ ಮತ್ತು ಆದರ್ಶಗಳ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಕಾರ, ನಂಬಿಕೆ, ಜಾತಿ ಮತ್ತು ಪಂಥ ಸೇರಿದಂತೆ ಜೀವನದ ಎಲ್ಲಾ ಅಂಶಗಳಲ್ಲಿ ಸಮಾನತೆಯ ಕಲ್ಪನೆಯನ್ನು ಉತ್ತೇಜಿಸಿದ ರಾಮಾನುಜಾಚಾರ್ಯರನ್ನು ಸ್ಮರಿಸಲು ಸಮಾನತೆಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
"ಇಂದು ರಾಮಾನುಜಾಚಾರ್ಯ ಅವರು ಸಮಾನತೆಯ ಬೃಹತ್ ಪ್ರತಿಮೆಯ ರೂಪದಲ್ಲಿ ಸಮಾನತೆಯ ಸಂದೇಶವನ್ನು ನಮಗೆ ನೀಡುತ್ತಿದ್ದಾರೆ" ಎಂದು ಪ್ರಧಾನಿ ಹೇಳಿದ್ದಾರೆ.
ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವು ಎಂಬ ಐದು ಲೋಹಗಳ ಸಂಯೋಜನೆಯಾದ 'ಪಂಚಲೋಹ'ದಿಂದ ಈ ಪ್ರತಿಮೆಯನ್ನು ಮಾಡಲಾಗಿದ್ದು, ಇದು ವಿಶ್ವದ ಅತ್ಯಂತ ಎತ್ತರದ ಪಂಚಲೋಹದ ಪ್ರತಿಮೆಗಳಲ್ಲಿ ಒಂದಾಗಿದೆ.
ಇದನ್ನು 54 ಅಡಿ ಎತ್ತರದ ಕಟ್ಟಡದ ಮೇಲೆ ಸ್ಥಾಪಿಸಲಾಗಿದ್ದು, ಇದನ್ನು 'ಭದ್ರ ವೇದಿ' ಎಂದು ಹೆಸರಿಸಲಾಗಿದೆ. ವೈದಿಕ ಡಿಜಿಟಲ್ ಲೈಬ್ರರಿ ಮತ್ತು ಸಂಶೋಧನಾ ಕೇಂದ್ರ, ಪ್ರಾಚೀನ ಭಾರತೀಯ ಪಠ್ಯಗಳು, ರಂಗಮಂದಿರ, ಶ್ರೀ ರಾಮಾನುಜಾಚಾರ್ಯರ ಅನೇಕ ಕೃತಿಗಳನ್ನು ವಿವರಿಸುವ ಶೈಕ್ಷಣಿಕ ಗ್ಯಾಲರಿಗಾಗಿ ಈ ಕಟ್ಟದಲ್ಲಿ ಮಹಡಿಗಳನ್ನು ಮೀಸಲಿರಿಸಲಾಗಿದೆ.







